ಬೆಂಗಳೂರು: ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಿದೆ.

ಆಹಾರ ಸುರಕ್ಷತಾ ಆಯುಕ್ತರು ಇಂತಹ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಹಾಗೂ ಮಾರಾಟವನ್ನು ನಿಷೇಧಿಸಿದ್ದಾರೆ. ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ನಿಷೇಧ ಅನ್ವಯವಾಗಲಿದೆ.

ಆದೇಶ ಉಲ್ಲಂಘಿಸುವ ತಯಾರಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳ ವಿರುದ್ಧ ತಪಾಸಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಲಿದ್ದಾರೆ.ತಂಬಾಕು ಹಾಗೂ ನಿಕೋಟಿನ್ ಉತ್ಪನ್ನಗಳಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.


