ಮೊಬೈಲ್ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಧರ್ಮರಾಜ್ ಸುವರ್ಣಗೆ ಜೀವಾವಧಿ ಶಿಕ್ಷೆ

ದಿನಾಂಕ; 21-09-2024 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣದ ಪಿರ್ಯಾದುದಾರರಾದ ಹನುಮಂತ ದುರ್ಗಪ್ಪ ವಡ್ಡರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:99/2024 ಕಲಂ:103 (1) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಆರೋಪಿ ಧರ್ಮರಾಜ್ ಸುವರ್ಣ ಪ್ರಾಯ: 50 ವರ್ಷ, ತಂದೆ: ಭಾಸ್ಕರ್ ಮೆಂಡನ್ ವಾಸ: ತೋಟಾ ಬೆಂಗ್ರೆ, ಮಂಗಳೂರು ತಾಲೂಕು ಎಂಬಾತನನ್ನು ದಿನಾಂಕ:26-09-2024 ರಂದು ಬೆಳಗಿನ ಜಾವ 03.00 ಗಂಟೆಗೆ ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ.


ಆರೋಪಿ ಧರ್ಮರಾಜ್ ಸುವರ್ಣ ಮತ್ತು ಮೃತ ಮುತ್ತು ಬಸವರಾಜ ವಡ್ಡರ್ @ ಮುದುಕಪ್ಪ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯದವರಾಗಿದ್ದು, ಇತ್ತೀಚೆಗೆ ಆರೋಪಿಯ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲ್ ನ್ನು ಮೃತ ಮುತ್ತು ಬಸವಾರಾಜ್ ತೆಗೆದುಕೊಂಡು ವಾಪಾಸ್ ನೀಡದೆ ಮೊಬೈಲ್ ಹಾಳು ಮಾಡಿದ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ ಆರೋಪಿಯು ಮುತ್ತು ಬಸವರಾಜ ವಡ್ಡರ್ @ ಮುದುಕಪ್ಪನನ್ನು ಮರದ ಸೋಂಟೆಯಿಂದ ಹೊಡೆದು ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ಕಲಂ:103(1) ಬಿ ಎನ್ ಎಸ್ ಮತ್ತು ಕಲಂ: 3(2)(v), ರಂತೆ ದೋಷಾರೋಪಣಾ ಪತ್ರ ಸಲ್ಲಿಸಿರುವುದಾಗಿದೆ.


ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸ್ಪೆಶಲ್ ಕೇಸ್ ನಂಬ್ರ 207/2024 ರಂತೆ ವಿಚಾರಣೆ ನಡೆದು, ಪ್ರಕರಣದಲ್ಲಿ ಆರೋಪಿ ಧರ್ಮರಾಜ್ ಸುವರ್ಣ ಎಂಬಾತನಿಗೆ ಮಾನ್ಯ ನ್ಯಾಯಾಧೀಶರಾದ ಶ್ರೀ ಜಗದೀಶ್ ರವರು ದಿನಾಂಕ:12.10.2026 ರಂದು ಕಲಂ:103(1) ಬಿ ಎನ್ ಎಸ್ ಕಾಯ್ದೆ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು 15,000 ದಂಡ , ಹಾಗೂ ದಂಡ ಪಾವತಿಸಲು ವಿಫಲನಾದರೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿರುತ್ತಾರೆ.


ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೊಹಮ್ಮದ್ ಸಲೀಂ ಅಬ್ಬಾಸ್, ರವರು ಭಾಗಶಃ ತನಿಖೆ ನಡೆಸಿ, ನಂತರ ತನಿಖೆಯಲ್ಲಿ ಎಸ್.ಸಿ-ಎಸ್.ಟಿ ಕಾಯ್ದೆ ಕಲಂಗಳು ಸೇರ್ಪಡೆಗೊಂಡಿರುವುದರಿಂದ ಮುಂದಿನ ತನಿಖೆಯ ಬಗ್ಗೆ ಕಡತವನ್ನು ಶ್ರೀ ಶ್ರೀಕಾಂತ.ಕೆ ಸಹಾಯಕ ಪೊಲೀಸ್ ಆಯುಕ್ತರು, ಉತ್ತರ ಉಪ ವಿಭಾಗ, ಪಣಂಬೂರು ಮಂಗಳೂರು ನಗರ ರವರಿಗೆ ನೀಡಿದ್ದು, ಸದರಿಯವರು ಮುಂದಿನ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿರುತ್ತಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ ರವರು ವಾದ ಮಂಡಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!