ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೊಳಗಿದ ಉಮೇಶ ಮುಂಡಳ್ಳಿ ಅವರ ಭಕ್ತಿಗಾನಾಮೃತ

ಭಟ್ಕಳ: ವಿಜಯದಶಮಿಯ ಶುಭದಿನವಾದ ಅಕ್ಟೋಬರ್ 20ರ ಮಂಗಳವಾರ, ಕುಂದಾಪುರ ತಾಲೂಕಿನ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ಸಾರಥ್ಯದ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಕ್ತಿಗಾನಾಮೃತ ಕಾರ್ಯಕ್ರಮ ನಡೆಯಿತು.

ಶರನ್ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದರ ಭಾಗವಾಗಿ ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಕ್ತಿಗಾನಾಮೃತ ಕಾರ್ಯಕ್ರಮವು ಭಕ್ತರ ಮನಸೂರೆಗೊಂಡಿತು. ಭಕ್ತಿಭಾವವನ್ನು ಹೆಚ್ಚಿಸಿದ ಸುಮಧುರ ಗೀತೆಗಳು ದೇವಿಯ ಸನ್ನಿಧಿಯಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದವು.

ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಭಟ್ಕಳದ ಗಾಯಕ ಗೋಪಾಲ ನಾಯ್ಕ, ನಿನಾದ ಉಮೇಶ ಹಾಗೂ ಉತ್ಥಾನ ಉಮೇಶ ಗಾಯನ ಪ್ರಸ್ತುತಪಡಿಸಿದರು. ಉಡುಪಿ ಜಿಲ್ಲೆಯ ಹಿರಿಯ ಕಲಾವಿದ ಉಮೇಶ ಮೇಸ್ತ ಅವರು ಹಾರ್ಮೋನಿಯಂ ವಾದನದೊಂದಿಗೆ ಗಾಯನದಲ್ಲಿಯೂ ಸಹಕರಿಸಿದರು. ಶ್ಯಾಮ್ ಮೇಸ್ತ ಅವರು ರಿದಂ ಪ್ಯಾಡ್‌ನಲ್ಲಿ ಸಾಥ್ ನೀಡಿದರು.

ವಿವಿಧ ಭಕ್ತಿಗೀತೆಗಳ ಗಾಯನದ ಮೂಲಕ ದೇವಿಯ ಮಹಿಮೆಯನ್ನು ಸಂಗೀತದ ಮೂಲಕ ಅರ್ಪಿಸಿದ ಕಲಾವಿದರು, ನೆರೆದಿದ್ದ ಭಕ್ತರ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ರಾಜಶೇಖರ್ ಹೆಗಡೆ ಅವರು ಗಾಯಕ ಉಮೇಶ ಮುಂಡಳ್ಳಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!