ಉಡುಪಿ:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಅನ್ನು ಸಡಿಲಗೊಳಿಸಲು ತಿದ್ದುಪಡಿ ತರಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿ ಜಟ್ಕಾ ಬಸ್ ನಿಲ್ದಾಣದ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸಿದರು. ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ದಿಕ್ಕಾರ ಕೂಗಿದರು.
ವಿಎಚ್ ಪಿ ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಮಾತನಾಡಿ, ಹಿಂದಿನ ಬಿಜೆಪಿ ಸರಕಾರ ಪ್ರಬಲವಾದ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿತ್ತು. ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮತ್ತು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಕಿಡಿಗೇಡಿಗಳನ್ನು ಸದೆಬಡಿಯುವ ಉದ್ದೇಶದಿಂದ ಕಠಿಣ ಕಾನೂನು ಜಾರಿಗೊಳಿಸಿತ್ತು. ಈ ಕಾನೂನಿನಡಿಯಲ್ಲಿ ಅಕ್ರಮವಾಗಿ ಗೋ ಸಾಗಾಟ, ವಧೆ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುತ್ತಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಗೋಹತ್ಯೆ ನಿಷೇಧ ಕಾನೂನಿನಲ್ಲಿ ಕೆಲವೊಂದು ತಿದ್ದುಪಡಿ ತರಲು ಹೊರಟಿದ್ದು, ಆ ಮೂಲಕ ಗೋಕಳ್ಳರಿಗೆ ರಿಯಾಯಿತಿ ನೀಡಲು ಸರಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರಕಾರ ಇದೇ ರೀತಿ ಅಲ್ಪಸಂಖ್ಯಾತರ ಓಲೈಕೆಯನ್ನು ಮುಂದುವರಿಸಿದರೆ, ಹಿಂದೂ ಸಮಾಜ ಸುಮ್ಮನೆ ಕೂರುವುದಿಲ್ಲ. ಸಂವಿಧಾನದಡಿಯಲ್ಲಿ ಹೋರಾಟ ಮಾಡುವ ಮೂಲಕ ಕಾಂಗ್ರೆಸ್ ಸರಕಾರದ ಹಿಂದೂ ದಮನ ನೀತಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಭಜರಂಗದಳ ವಿಭಾಗ ಸಂಚಾಲಕ ಪುನೀತ್ ಅತ್ತಾವರ, ಗೋ ರಕ್ಷಾ ವಿಭಾಗದ ಮಂಗಳೂರು ಜಿಲ್ಲಾ ಪ್ರಮುಖ ಪ್ರಸಾದ್ ಅಂಚನ್, ಪ್ರಮುಖರಾದ ರಾಜೇಶ್ ಉಚ್ಚಿಲ, ಹರೀಶ್ ಶೇಟ್, ಪ್ರಸಾದ್ ಅಂಚನ್ ಮೊದಲಾದವರು ಪಾಲ್ಗೊಂಡಿದ್ದರು.