ಮಂಗಳೂರು: ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಕಾಂಗ್ರೆಸ್ ಆಡಳಿತ ತಿರಸ್ಕರಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಎರಡೂ ಪಟ್ಟಣ ಪಂಚಾಯತ್‌ಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರುವುದು ಜನರ ಭಾವನೆಗಳು ಬಿಜೆಪಿ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದರು.
ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅದೃಷ್ಟ ಪಕ್ಷಕ್ಕೆ ಸಿಕ್ಕಿದೆ ಮತ್ತು ಅಲ್ಪಸಂಖ್ಯಾತ ಮತದಾರರು ಸಹ ಬಿಜೆಪಿಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ . ಈ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯ ವೈಖರಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ . ಇದು ಮುಂದೆ ಗ್ರಾಮ ಪಂಚಾಯತ್ , ತಾಲ್ಲೂಕು ಪಂಚಾಯತ್ , ಜಿಲ್ಲಾ ಪಂಚಾಯತ್ ಗಳಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತವನ್ನು ಪಡೆಯುವ ಸೂಚನೆಯಾಗಿದೆ .
ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮತದಾರರು ಬಜ್ಪೆ ಮತ್ತು ಕಿನ್ನಿಗೋಳಿ ಪರಿಸರದಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಕಿನ್ನಿಗೋಳಿ, ಕಟೀಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿ ಬಾರಿಯೂ ಪೈಪೋಟಿ ಇತ್ತು. ಈ ಬಾರಿ ಎಲ್ಲ ಕಡೆ ಬಿಜೆಪಿಯನ್ನು ಜನರು ಬೆಂಬಲಿಸಿದ್ದಾರೆ. ಬಜ್ಪೆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್‌ನ ಭದ್ರಕೋಟೆ ಬಜ್ಜೆಯ ಗ್ರಾಪಂಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಆಡಳಿತ ಇತ್ತೆಂದು ತಿಳಿಸಿದರು .
ರಾಜ್ಯ ಸರ್ಕಾರವು ಅಧಿಕಾರವನ್ನು ಉಳಿಸಿಕೊಳ್ಳುವತ್ತ ಮಾತ್ರ ಗಮನಹರಿಸಿದೆ, ನಿಜವಾದ ಅಭಿವೃದ್ಧಿ ನಡೆಯುತ್ತಿಲ್ಲ. ಜಾತಿ ಜನಗಣತಿ ನಡೆಸುವ ಬದಲು, ಸರ್ಕಾರ ಗುಂಡಿಗಳ ಮುಚ್ಚುವತ್ತ ಗಮನ ಹರಿಸಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ , ಅರುಣ್ ಶೇಟ್ , ಸುನಿಲ್ ಆಳ್ವ , ವಸಂತ ಪೂಜಾರಿ ಉಪಸ್ಥಿತರಿದ್ದರು.