ಮಂಗಳೂರು : ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ಅರುಣ್ ಶೆಟ್ಟಿ ಬಜ್ಪೆ ಎಂಬಾತ ವೇದಿಕೆಯಲ್ಲೇ ಅವಮಾನ ಮಾಡಿರುವ ನಾಚಿಕಗೇಡಿನ ಘಟನೆ ವರದಿಯಾಗಿತ್ತು. ಇದು ಬಹಿರಂಗವಾಗಿ ನಡೆದರೆ, ಅದನ್ನೂ ಮೀರಿ ಕ್ಯಾಮೆರಾದ ಹಿಂದೆ ಮತ್ತೊಂದು ಕೃತ್ಯವೂ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರು: ಕಂಬಳ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಕರಾವಳಿ ಕರ್ನಾಟಕವನ್ನು ಮೀರಿ ದೇಶಾದ್ಯಂತ ಪ್ರಸಿದ್ಧಿಯನ್ನು ಪಡೆಯುತ್ತಿದೆ. ತುಳುನಾಡಿನ ಹೆಮ್ಮೆಯ ಪಾರಂಪರಿಕ ಕ್ರೀಡೆ ಕಂಬಳ ನೋಡುಗರಿಗೆ ಮನರಂಜನೆಯನ್ನು ನೀಡುತ್ತಿದೆಯಾದರೂ, ಅದರೊಳಗೆ ನಡೆಯುತ್ತಿರುವ ರಾಜಕೀಯಗಳು, ಷಡ್ಯಂತ್ರಗಳು, ಹುಳುಕುಗಳು ಒಂದೊಂದಾಗಿಯೇ ಹೊರ ಬರುತ್ತಿದೆ.
ಕಂಬಳ ಕೂಟ
ಕಂಬಳ ಕೂಟ
ಹೌದು.. ಕಳೆದ ಶನಿವಾರ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ಅರುಣ್ ಶೆಟ್ಟಿ ಬಜ್ಪೆ ಎಂಬಾತ ವೇದಿಕೆಯಲ್ಲೇ ಅವಮಾನ ಮಾಡಿರುವ ನಾಚಿಕಗೇಡಿನ ಘಟನೆ ವರದಿಯಾಗಿತ್ತು. ಇದು ಬಹಿರಂಗವಾಗಿ ನಡೆದರೆ, ಅದನ್ನೂ ಮೀರಿ ಕ್ಯಾಮೆರಾದ ಹಿಂದೆ ಮತ್ತೊಂದು ಕೃತ್ಯವೂ ನಡೆದಿದೆ ಎಂದು ವರದಿಯಾಗಿದೆ.
ಅರುಣ್ ಶೆಟ್ಟಿ ಬಜ್ಪೆ ಎಂಬಾತ ಮೈಕ್ ಕಸಿದುಕೊಂಡು ಹಿರಿಯ ತೀರ್ಪುಗಾರ ಗುಣಪಾಲ ಕಡಂಬ ಅವರಿಗೆ ವೇದಿಕೆಯಲ್ಲೇ ಅವಮಾನ ಮಾಡಿರುವುದು ಒಂದು ಕಡೆಯಾದರೆ ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಎಂಬ ವ್ಯಕ್ತಿ ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ನಿಂದನೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಕೋಣಗಳು ಓಡಿ ರೇಸ್ ಪೂರ್ಣಗೊಳಿಸುವ ಮಂಜೊಟ್ಟಿ ಬಳಿ ಇರುವ ತೀರ್ಪುಗಾರರ ಕೌಂಟರ್‌ನಲ್ಲಿ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಎಂಬಾತ ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ಅವಾಚ್ಯವಾಗಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಲೋಕೇಶ್ ಮುಚ್ಚೂರು ಈ ರೀತಿ ಅಪಮಾನಕಾರಿಯಾಗಿ ದುರ್ವರ್ತನೆ ತೋರಿದ್ದರೂ ಸಹ ಅಲ್ಲೇ ಇದ್ದ ಮತ್ತೋರ್ವ ಹಿರಿಯ ತೀರ್ಪುಗಾರ ವಿಜಯ್ ಕುಮಾರ್ ಕಂಗಿನಮನೆ ಸೇರಿದಂತೆ ಕಂಬಳದಲ್ಲಿ ತೊಡಗಿಸಿಕೊಂಡಿರುವ ಹಿರಿಯರು ತುಟಿಪಿಟಿಕ್ ಅನ್ನದೇ ಇರುವುದು ಕಂಬಳಾಭಿಮಾನಿಗಳಲ್ಲಿ ತೀವ್ರ ಆಕ್ರೋಶವನ್ನು ಉಂಟು ಮಾಡಿದೆ. ಕಂಬಳಕ್ಕೆ ಒಂದು ಸಾಂಸ್ಥಿಕ ಚೌಕಟ್ಟನ್ನು ತಂದುಕೊಟ್ಟಿರುವ ಗುಣಪಾಲ ಕಡಂಬ ಅವರು ಲೋಕೇಶ್ ಮುಚ್ಚೂರು ಎಂಬಾತನ ದುರ್ವರ್ತನೆಯಿಂದ ಮನನೊಂದಿದ್ದು, ತನಗೆ ಕಂಬಳದ ಸಹವಾಸವೇ ಸಾಕು ಎನ್ನುವಷ್ಟರ ಮಟ್ಟಿಗೆ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ ಎಂಬ ಮಾತು ಅವರ ಆಪ್ತ ವಲಯದಿಂದ ಕೇಳಿ ಬಂದಿದೆ.
ಲೋಕೇಶ್ ಮುಚ್ಚೂರು ದುರ್ವರ್ತನೆ ಇದೇ ಮೊದಲೇನಲ್ಲ!
ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಎಂಬಾತನ ದುರ್ವರ್ತನೆ ಇದು ಮೊದಲೇನಲ್ಲ, ಈ ಹಿಂದೆ ಕೂಡ ಗುಣಪಾಲ ಕಡಂಬ ಅವರ ವಿರುದ್ಧ ಸುಳ್ಳು ಆರೋಪ ಮಾಡಿ ಕಂಬಳಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದ. ಈತನ್ಮಧ್ಯೆ, ಕಳೆದ ಕಂಬಳದಲ್ಲಿ ಗುಣಪಾಲ ಕಡಂಬ ಅವರನ್ನು ನಿಂದಿಸಿ ಲೋಕೇಶ್ ಶೆಟ್ಟಿ ಮುಚ್ಚೂರು ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆತನನ್ನು ಕಂಬಳದಿಂದಲೇ ಬ್ಯಾನ್ ಮಾಡಬೇಕು ಎಂಬ ಕೂಗು ಕಂಬಳಪ್ರಿಯರಲ್ಲಿ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲೋಕೇಶ್ ಶೆಟ್ಟಿ ಮುಚ್ಚೂರು ವಿರುದ್ಧ ಅನೇಕರು ಕಿಡಿಕಾರಿದ್ದು, ಅತ ಕಂಬಳವನ್ನು ಹಾಳು ಮಾಡಲೆಂದೇ ಸಮಿತಿಗೆ ಸೇರಿರುವ ಹುಳ, ಕಂಬಳ ಸಮಿತಿಯ ಅಧ್ಯಕ್ಷರು ಕೂಡ ಆತನ ತಾಳಕ್ಕೆ ಕುಣಿಯುತ್ತಿದ್ದಾರೆ ಎಂಬ ಆಡಿಯೋವೊಂದು ವೈರಲ್ ಆಗಿದ್ದು, ಗುಣಪಾಲ ಕಡಂಬ ಅವರು ಕಂಬಳಕ್ಕೆ ಬರುವ ಹೊತ್ತಿನಲ್ಲಿ ಆತ ಇನ್ನೂ ಬಚ್ಚಾ ಆಗಿದ್ದ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಗುಣಪಾಲ ಕಡಂಬ ಅವರಿಗೆ ಅಪಮಾನ ಮಾಡಿರುವ ಲೋಕೇಶ್ ಶೆಟ್ಟಿ ಮುಚ್ಚೂರು ಮತ್ತು ಅರುಣ್ ಶೆಟ್ಟಿ ಬಜಪೆ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದಲ್ಲಿ ಮುಂದಿನ ಕಂಬಳದಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಕಂಬಳಾಭಿಮಾನಿಗಳು ಮತ್ತು ಗುಣಪಾಲ ಕಡಂಬ ಅವರ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಹಿರಿಯ ಕಂಬಳ ಹೋರಾಟಗಾರ ಗುಣಪಾಲ ಕಡಂಬ ಅವರನ್ನು ಹೀಯಾಳಿಸುವ, ಅವರನ್ನು ಕಂಬಳದಿಂದ ಹೊರಗಿಡುವ ಕೃತ್ಯಗಳನ್ನು ಸ್ವತಃ ಕೆಲ ಸೋ ಕಾಲ್ಡ್ ಕಂಬಳ ಕೂಟದ ನಾಯಕರು ಮಾಡುತ್ತಿದ್ದು, ಇದರ ಬಗ್ಗೆಯೂ ಕಂಬಳದ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂಬಳಕ್ಕೆ ಒಂದು ಅಥ್ಲೆಟಿಕ್ ರೂಪುರೇಷೆ ಸಿಗಬೇಕಿದ್ದರೆ ಅದಕ್ಕೆ ಗುಣಪಾಲ ಕಡಂಬ ಅವರು ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದಿದ್ದಾರೆ ಅನ್ನೋದು ಪ್ರತಿಯೊಬ್ಬ ಕಂಬಳ ಅಭಿಮಾನಿಗೂ ಗೊತ್ತಿರುವ ಸಂಗತಿ, ಆದರೆ ಕಂಬಳ ಸಮಿತಿಯ ಯಾವುದೇ ಸಭೆ ನಡೆಯುವಾಗ ಕಡಂಬ ಅವರನ್ನು ಆಹ್ವಾನಿಸದೇ, ಅವರನ್ನು ದೂರವಿಟ್ಟೇ ಅಪಮಾನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಾಕ್ಷ್ಯ ಎಂಬಂತೆ ಅನೇಕ ಸಭೆಗಳಲ್ಲಿ ಗುಣಪಾಲ ಕಡಂಬ ಅವರು ಕಾಣಿಸಿಕೊಂಡಿಲ್ಲ.
ಕಂಬಳ ಶಿಸ್ತು ಸಮಿತಿಯ ವಿರುದ್ಧವೂ ಆಕ್ರೋಶ!
ಮತ್ತೊಂದೆಡೆ ಕಣ್ಣಿದ್ದೂ ಕುರುಡಾಗಿರುವ ರಾಜ್ಯ ಕಂಬಳ ಅಸೋಸಿಯೇಶನ್ ಮತ್ತು ಶಿಸ್ತು ಸಮಿತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಮಿತಿಗಳು ಸ್ಟಾರ್ ಹೋಟೆಲ್‌ಗಳಲ್ಲಿ ಸಭೆ ಮಾಡಿ ಭರ್ಜರಿ ಊಟ ಮಾಡಿ ಹರಟೆ ಹೊಡೆಯೋದಕ್ಕಷ್ಟೇ ಸೀಮಿತ, ಕಂಬಳ ಉನ್ನತಿ, ಆಧುನೀಕರಣ ಸೇರಿದಂತೆ ಕಂಬಳದ ಶ್ರೇಯೋಭಿವೃದ್ಧಿಗೆ ಯಾವುದೇ ಕೆಲಸ ಮಾಡುತ್ತಿಲ್ಲ, ಕಂಬಳದ ಭೀಷ್ಮ ಗುಣಪಾಲ ಕಡಂಬ ಅವರಿಗೆ ಈ ರೀತಿ ಅವಮಾನ ಆಗಿದ್ದರೂ ಸಹ ಕಂಬಳ ಸಮಿತಿಯ ಅಧ್ಯಕ್ಷರಾಗಲಿ, ಶಿಸ್ತು ಸಮಿತಿಯಾಗಲಿ, ತೀರ್ಪುಗಾರರ ಕಮಿಟಿಯಾಗಲಿ ಇನ್ನೂ ಮಾತಾಡದೇ ಇರುವುದು ಅವರ ಮೌನ ಸಮ್ಮತಿಯನ್ನು ಸೂಚಿಸುತ್ತದೆ, ನೀವು ಹೀಗೆ ಮೌನವಾಗಿದ್ದರೆ ನಾಳೆ ನಿಮ್ಮ ಬುಡಕ್ಕೆ ಬರುತ್ತದೆ ಎಂಬ ಆಕ್ರೋಶವನ್ನು ಕಂಬಳಾಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮತ್ತೋರ್ವ ಹಿರಿಯ ಕಂಬಳ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು ಅವರ ಮೇಲೂ ಸಹ ಇದೇ ತರಹದ ದುರ್ವರ್ತನೆ ನಡೆದಿತ್ತು, ಆಗಲೂ ಕೂಡ ಯಾರೂ ಧ್ವನಿಯೆತ್ತದೇ ಇರುವುದು ಗಮನಾರ್ಹ.
ಮದ್ಯ ಸರಬರಾಜು?
ಮತ್ತೊಂದೆಡೆ ಕೆಲವು ಕಂಬಳ ಕೂಟಗಳಲ್ಲಿ ರಾತ್ರಿ ಸಭಾ ಕಾರ್ಯಕ್ರಮ ಮುಗಿದ ಬಳಿಕ ಕಂಬಳ ಆಯೋಜಕರೇ ಕೆಲವರಿಗೆ ‘ಎಣ್ಣೆ ಊಟ’ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಈ ‘ಎಣ್ಣೆ ಊಟ’ ನೆತ್ತಿಗೇರಿದ್ದರಿಂದಲೇ ಕೆಲವು ಕಡೆಗಳಲ್ಲಿ ಇಂತಹ ಅಪಸವ್ಯಗಳು ನಡೆಯಲು ಆಸ್ಪದ ನೀಡಿದಂತಾಗುತ್ತದೆ. ಹೀಗಾಗಿ ಇಂತಹ ಯಾವುದೇ ಅಚಾತುರ್ಯಗಳಿಗೆ ಸಂಘಟಕರು ಅವಕಾಶ ಮಾಡಿಕೊಡಬಾರದು ಅನ್ನೋದು ನೈಜ ಕಂಬಳ ಪ್ರೇಮಿಗಳ ಮಾತು.
ಕಂಬಳದ ಭೀಷ್ಮ ‘ಕಡಂಬ’ರಿಗೆ ವೇದಿಕೆಯಲ್ಲೇ ಅವಮಾನ! ಮಂಗಳೂರು ಕಂಬಳ ಕ್ರೀಡಾಕೂಟದಲ್ಲಿ ಇದೆಂಥಾ ಅವ್ಯವಸ್ಥೆ?
ಗುಣಪಾಲ ಕಡಂಬ ಅಭಿಮಾನಿ ಬಳಗ ರಚನೆ!
ಈತನ್ಮಧ್ಯೆ ಕಂಬಳ ಕ್ರೀಡೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗುಣಪಾಲ ಕಡಂಬ ಅವರಿಗೆ ಅವಮಾನ ಆಗಿದ್ದನ್ನು ಖಂಡಿಸಿ ‘ಗುಣಪಾಲ ಕಡಂಬ ಅಭಿಮಾನಿ ಬಳಗ’ ಹೆಸರಿನಲ್ಲಿ ಐದಾರು ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದು, ಸಾವಿರಾರು ಮಂದಿ ಈ ಗ್ರೂಪ್‌ಗಳಿಗೆ ಸೇರಿ ಕಡಂಬ ಅವರ ಪರವಾಗಿ ಧ್ವನಿಗೂಡಿಸಿದ್ದಾರೆ. ಒಂದು ವೇಳೆ ಅರುಣ್ ಶೆಟ್ಟಿ ಮತ್ತು ಲೋಕೇಶ್ ಶೆಟ್ಟಿ ಮುಚ್ಚೂರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದಲ್ಲಿ ಹೋರಾಟ ರೂಪಿಸುವ ಯೋಜನೆಯನ್ನು ಗುಣಪಾಲ ಕಡಂಬ ಅಭಿಮಾನಿ ಬಳಗದವರು ಮಾಡಿದ್ದಾರೆ.
ಶಿಸ್ತು ಸಮಿತಿ ಹೆಸರಿಗಷ್ಟೇ ಸೀಮಿತ! ಬಾಯಿಗೆ ಬೀಗ!
ಇದೆಲ್ಲದರ ನಡುವೆ ಕಂಬಳ ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಮಾತನಾಡಬೇಕಾದ ಅಥವಾ ಶಿಸ್ತು ಕ್ರಮ ಕೈಗೊಳ್ಳಬೇಕಾದ ಕಂಬಳ ಶಿಸ್ತು ಸಮಿತಿ ಈ ಘಟನೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ನಿದ್ದೆಯಲ್ಲಿದೆ. ಕ್ರೀಡೆಯ ಸಂದರ್ಭದಲ್ಲಿ ತೀರ್ಪುಗಾರರು ಅಥವಾ ಇತರರ ಬಗ್ಗೆ ಆಶಿಸ್ತಿನ ನಡವಳಿಕೆಗಳನ್ನು ತಡೆಯುವುದು ಮತ್ತು ಶಿಸ್ತು ಉಲ್ಲಂಘನೆಯಾದರೆ ಶಿಕ್ಷೆ ವಿಧಿಸುವುದು ಈ ಸಮಿತಿಯ ಉದ್ದೇಶ. ಆದರೆ ಕಂಬಳ ಅಸೋಸಿಯೇಶನ್ ಆಗಲಿ, ಶಿಸ್ತು ಸಮಿತಿ ಆಗಲಿ ಈ ಬಗ್ಗೆ ಧ್ವನಿಯೆತ್ತದೇ ಇರುವುದು ಕಂಬಳ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಂಬಳಕ್ಕಿಂತ ಸಭಾ ಕಾರ್ಯಕ್ರಮಕ್ಕೆ ಆದ್ಯತೆ!
ಸಾಮಾನ್ಯವಾಗಿ ಹೆಸರೇ ಸೂಚಿಸುವಂತೆ ಯಾವುದೇ ಕಂಬಳ ಕೂಟದಲ್ಲಿ ಕಂಬಳ ಕ್ರೀಡೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ಕಂಬಳಕ್ಕೆ ಕೊಡಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಕಂಬಳ ಕೂಟಗಳು ಕಂಬಳಕ್ಕಿಂತ ಹೆಚ್ಚಾಗಿ ಸಭಾ ಕಾರ್ಯಕ್ರಮಕ್ಕೆ, ರಾಜಕೀಯ ನಾಯಕರ ಗುಣಗಾನಕ್ಕೆ ಮಹತ್ವ ನೀಡುತ್ತಿದೆ. ಪ್ರತೀ ಕಂಬಳದ ಸಮಯದಲ್ಲೂ ಕಂಬಳಾಭಿಮಾನಿಗಳು ಲೈವ್ ನೋಡುವ ಸಮಯದಲ್ಲಿ ಈ ಬಗ್ಗೆ ತಮ್ಮ ಅಪಸ್ವರ ಎತ್ತುತ್ತಲೇ ಇರುತ್ತಾರೆ.
ಟಾಪ್ ವಿಡಿಯೋಗಳು
ಇನ್ನೂ ಓದಿ
ನಿಯಮದ ಪ್ರಕಾರ ಒಂದು ಕಂಬಳ ಕೂಟ 24 ಗಂಟೆಯಲ್ಲಿ ಮುಕ್ತಾಯವಾಗಬೇಕು. ಆದರೆ ಕಂಬಳ ಸಂಘಟಕರು ಕಾರ್ಯಕ್ರಮಕ್ಕೆ ಬರುವ ರಾಜಕೀಯ ನಾಯಕರ, ಅತಿಥಿಗಳ ಸತ್ಕಾರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಪರಿಸ್ಥಿತಿ ತಮ್ಮ ಕೈಮೀರಿ ಹೋದಾಗ 24 ಗಂಟೆಯಲ್ಲಿ ಕಂಬಳ ಮುಗಿಸುವ ಹೊಣೆಗಾರಿಕೆಯನ್ನು ತೀರ್ಪುಗಾರರ ಹೆಗಲಿಗೆ ಹಾಕಿ ಬಿಡುತ್ತಾರೆ. ಇಂತಹ ವೇಳೆಯಲ್ಲಿ ಒತ್ತಡಕ್ಕೆ ಸಿಲುಕುವ ತೀರ್ಪುಗಾರರು ಕಂಬಳ ಬೇಗ ಮುಗಿಯಬೇಕು ಎನ್ನುವ ಕಾಳಜಿಯಿಂದ ಮಾತನಾಡಿದರೆ ಕೆಲವರು ಅದಕ್ಕೂ ಅಪಸ್ವರ ಎತ್ತುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.