ವಾಮಂಜೂರು ಅಪ್ರಾಪ್ತ ಬಾಲಕಿ ಸಾಮೂಹಿಕ ಅತ್ಯಾಚಾರ–ಕೊಲೆ: ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹೈಕೋರ್ಟ್ ದೃಢೀಕರಣ

ಮಂಗಳೂರು:ವಾಮಂಜೂರಿನ ಉಳಾಯಿಬೆಟ್ಟು ಟೈಲ್ ಫ್ಯಾಕ್ಟರಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ದೃಢೀಕರಿಸಿದೆ.ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿದ್ದೇ ಆದರೆ ಇಂತಹ ಕ್ರೂರ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ವಿಚಾರಣ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ದೃಢೀಕರಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಜೊತೆಗೆ, ಶಿಕ್ಷೆ ರದ್ದುಪಡಿಸುವಂತೆ ಅಪರಾಧಿಗಳಾದ ಮಧ್ಯಪ್ರದೇಶದ ಜೈಬನ್ ಆದಿವಾಸಿ, ಮುಕೇಶ್ ಸಿಂಗ್ ಹಾಗೂ ಝಾರ್ಖಂಡ್‌ನ ಮನೀಶ್ ತಿರ್ಕಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.ನ್ಯಾಯಪೀಠ ತನ್ನ ಆದೇಶದಲ್ಲಿ, ಸಂತ್ರಸ್ತೆಯ ಜೀವವನ್ನು ಲೆಕ್ಕಿಸದೇ ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿದ್ದು, ಇದು ಅಪರಾಧವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದ ಕೃತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಕ್ರೂರ ಕೃತ್ಯಗಳಲ್ಲಿ ಗಲ್ಲು ಶಿಕ್ಷೆ ನೀಡುವುದು ಸಮಂಜಸ ಎಂದು ನ್ಯಾಯಾಲಯ ತಿಳಿಸಿದೆ.

ಸಂತ್ರಸ್ತೆ ಕೇವಲ 7-8 ವರ್ಷದ ಬಾಲಕಿಯಾಗಿದ್ದು, ಆರೋಪಿಗಳ ಮೇಲೆ ನಂಬಿಕೆ ಇಟ್ಟಿದ್ದಳು. ಅದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ತಿಂಡಿ ಕೊಡಿಸುವ ನೆಪದಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ತಮ್ಮ ಕಾಮತೃಷೆಯನ್ನು ತೀರಿಸಿಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ. ವೈದ್ಯಕೀಯ ವರದಿಯ ಪ್ರಕಾರ ಸಂತ್ರಸ್ತೆಯ ಖಾಸಗಿ ಅಂಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಅತೀವ ರಕ್ತಸ್ರಾವವಾಗಿದ್ದುದೂ ದೃಢಪಟ್ಟಿದೆ.

ಈ ಘಟನೆ 2021ರ ನವೆಂಬರ್ 21ರಂದು ಮಂಗಳೂರು ಸಮೀಪದ ವಾಮಂಜೂರು ಬಳಿಯ ಟೈಲ್ಸ್ ಕಾರ್ಖಾನೆಯಲ್ಲಿ ನಡೆದಿತ್ತು. ಆರೋಪಿಗಳು ಆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯ ಪುತ್ರಿಯಾಗಿದ್ದ ಸಂತ್ರಸ್ತೆಯನ್ನು ಮನೀಶ್ ತಿರ್ಕಿ ಕೊಠಡಿಗೆ ಕರೆದುಕೊಂಡು ಹೋಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದು, ಇತರ ಇಬ್ಬರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಚರಂಡಿಗೆ ಎಸೆದಿದ್ದರು.

ಮೃತದೇಹ ಪತ್ತೆಯಾದ ನಂತರ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳು, ಎಫ್‌ಎಸ್‌ಎಲ್ ವರದಿ ಸೇರಿದಂತೆ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಿಚಾರಣ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.ವಿಚಾರಣ ನ್ಯಾಯಾಲಯವು ಆರೋಪಿಗಳ ಅಪರಾಧ ಸಾಬೀತುಪಡಿಸಿ, ಅವರಿಗೆ ಗಲ್ಲು ಶಿಕ್ಷೆಯೊಂದಿಗೆ ತಲಾ 40 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಪ್ರಕರಣದ ಭೀಕರತೆ ಮತ್ತು ಸಮಾಜದ ಮೇಲೆ ಬೀರಿದ ಪರಿಣಾಮವನ್ನು ಗಮನಿಸಿದ ಹೈಕೋರ್ಟ್, ವಿಚಾರಣ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ದೃಢೀಕರಿಸಿ, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ.ಈ ಪ್ರಕರಣ ಕೇವಲ ನ್ಯಾಯಾಂಗದ ಆತ್ಮಸಾಕ್ಷಿಗೆ ಮಾತ್ರವಲ್ಲ, ಇಡೀ ಸಮಾಜದ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿದ ದುರ್ಘಟನೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!