ಮಂಗಳೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಹೀಗಿದ್ದರೂ ಪಕ್ಷದ ಅನುಷ್ಠಾನ ಸಮಿತಿಯ ಅಧಿಕಾರಿಗಳಿಗೆ ಗೌರವಧನವನ್ನು ಸರಿಯಾಗಿ ನೀಡಿರುವುದಾಗಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಬಳಿಕ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ವೈಫಲ್ಯ ಹಾಗೂ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ನಾಯಕರೇ ಬಹಿರಂಗವಾಗಿ ಮಾತನಾಡುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು .
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಗೃಹಲಕ್ಷ್ಮಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳು ಹಾಗೂ ಭ್ರಷ್ಟಾಚಾರ ನಡೆದಿರುವುದು ಈಗ ಬೆಳಕಿಗೆ ಬರುತ್ತಿದೆ ಎಂದು ಕಟುವಾಗಿ ಟೀಕಿಸಿದರು .
ಗೃಹಲಕ್ಷ್ಮಿ ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಅನುಷ್ಠಾನ ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರನ್ನೇ ವಿವಿಧ ಹಂತಗಳಲ್ಲಿ ನೇಮಕ ಮಾಡಲಾಗಿದೆ. ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಮಿತಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಗೌರವಧನ ನೀಡುವ ಮೂಲಕ ಸರ್ಕಾರಿ ಯೋಜನೆಯನ್ನು ಪಕ್ಷದ ಸಂಘಟನೆ ಬಲಪಡಿಸಲು ಬಳಸಿಕೊಳ್ಳಲಾಗಿದೆ ಎಂದು ದೂರಿದರು.
ಮಹಿಳೆಯರಿಗೆ ನೀಡಬೇಕಾದ ಯೋಜನೆಯ ಲಾಭದ ಜತೆಗೆ ಕಾಂಗ್ರೆಸ್ ಕಾರ್ಯಕರ್ತರಿಗೂ ಲಕ್ಷಾಂತರ ರೂಪಾಯಿ ಗೌರವಧನ ನೀಡಲಾಗಿದೆ. ಯೋಜನೆಯ ಫಲಾನುಭವಿಗಳ ಆಯ್ಕೆ, ಮರಣ ಹೊಂದಿದವರ ಹೆಸರಿನಲ್ಲಿಯೂ ಹಣ ಜಮೆಯಾಗಿರುವುದು ಸೇರಿದಂತೆ ಹಲವು ಅಕ್ರಮಗಳಿಗೆ ಅನುಷ್ಠಾನ ಸಮಿತಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫಲಾನುಭವಿಗಳ ಮರುಪರಿಶೀಲನೆ ಅಗತ್ಯವಿದೆ ಎಂದು ಹೇಳಿರುವುದು ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಯೋಜನೆ ಅನುಷ್ಠಾನದಲ್ಲಿ ಲೋಪಗಳಿರುವುದನ್ನು ಒಪ್ಪಿಕೊಂಡಿರುವುದು ಸರ್ಕಾರದ ವೈಫಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ಭಾರತೀಯ ಜನತಾ ಪಕ್ಷ ವಿರೋಧಿಸಿಲ್ಲ. ಅವುಗಳನ್ನು ಪಾರದರ್ಶಕವಾಗಿ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಬಿಜೆಪಿ ನಿರಂತರವಾಗಿ ಒತ್ತಾಯಿಸುತ್ತ ಬಂದಿದೆ. ವಿಧಾನಮಂಡಲ ಅಧಿವೇಶನದಲ್ಲಿಯೂ ಬಾಕಿ ಹಣ ಬಿಡುಗಡೆ ಹಾಗೂ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಬಿಜೆಪಿ ಶಾಸಕರು ಪ್ರಶ್ನೆ ಎತ್ತಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಪ್ರೇಮಾನಂದ ಶೆಟ್ಟಿ , ತಿಲಕ್ ರಾಜ್ , ಗುರು ಚರಣ್ , ಕದ್ರಿ ಮನೋಹರ್ , ಪೂಜಾ ಪೈ , ಪೂರ್ಣಿಮಾ ಉಪಸ್ಥಿತರಿದ್ದರು .