ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ವತಿಯಿಂದ ಆಗಸ್ಟ್ 4ರಂದು ಕಾವೂರು ಜಂಕ್ಷನ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ವಿಧಿಸಲಾಗುತ್ತಿರುವ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ಹಾಗೂ ಖಾಸಗಿ ವಾಹನಗಳಿಗೆ ನೀಡಲಾಗುತ್ತಿರುವ ವಿಶೇಷ ಸೌಲಭ್ಯವನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಸಂಘದ ಅಧ್ಯಕ್ಷ ಆನಂದ ಕೆ, ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಪಾರ್ಕಿಂಗ್ ಶುಲ್ಕವನ್ನು ₹100ರಿಂದ ₹180ಕ್ಕೆ ಹಾಗೂ ಮ್ಯಾಕ್ಸಿ ಕ್ಯಾಬ್ ವಾಹನಗಳ ಶುಲ್ಕವನ್ನು ₹200ರಿಂದ ₹500ಕ್ಕೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಖಾಸಗಿ ವಾಹನಗಳಿಗೆ ಮೊದಲ 10 ನಿಮಿಷ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಮುಂಗಡ ಬುಕ್ಕಿಂಗ್ ಮಾಡಿಕೊಂಡು ಪ್ರಯಾಣಿಕರನ್ನು ಕರೆತರಲು ಅಥವಾ ಬಿಡಲು ಬರುವ ಪ್ರವಾಸಿ ವಾಹನಗಳಿಗೆ ಇದೇ ಸೌಲಭ್ಯ ನಿರಾಕರಿಸಲಾಗಿದೆ. ಕೇವಲ ಎರಡು ನಿಮಿಷ ನಿಂತರೂ ₹180 ಶುಲ್ಕ ವಿಧಿಸಲಾಗುತ್ತಿದ್ದು, ಇದು ಟ್ಯಾಕ್ಸಿ ಚಾಲಕರ ಮೇಲಿನ ತಾರತಮ್ಯ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಸಂಸದರು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪಾರ್ಕಿಂಗ್ ಶುಲ್ಕಕ್ಕಿಂತಲೂ ಖಾಸಗಿ ಮತ್ತು ಪ್ರವಾಸಿ ವಾಹನಗಳ ನಡುವಿನ ತಾರತಮ್ಯವನ್ನು ನಿವಾರಿಸಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆಯಾಗಿದೆ . ವಿಮಾನ ನಿಲ್ದಾಣದಲ್ಲಿ ನಗದು ಪಾವತಿಗೆ ಅವಕಾಶ ನೀಡದೆ ಕೇವಲ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಹಿರಿಯ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ದೂರಿದರು.

ಮ್ಯಾಕ್ಸಿ ಕ್ಯಾಬ್ ವಾಹನಗಳಿಗೆ ಕನಿಷ್ಠ 20 ನಿಮಿಷ ಉಚಿತ ಸಮಯ ಹಾಗೂ ಟ್ಯಾಕ್ಸಿಗಳಿಗೆ ಖಾಸಗಿ ವಾಹನಗಳಂತೆ ಮೊದಲ 10 ನಿಮಿಷ ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆ ಸರ್ಕಾರದ ವಿರುದ್ಧವಲ್ಲ; ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ತಾರತಮ್ಯ ನೀತಿಯ ವಿರುದ್ಧ ನಡೆಯಲಿದ್ದು, ಉಭಯ ಜಿಲ್ಲೆಗಳ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಪದಾಧಿಕಾರಿಗಳಾದ ಹರೀಶ್ ಶೆಟ್ಟಿ, ಉದಯ್ ಕುಮಾರ್, ಸುರೇಶ್ ಸಾಲಿಯಾನ್, ರಾಜೇಶ್ ಉಪಸ್ಥಿತರಿದ್ದರು.


