ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಬೈಂದೂರು ತಾಲೂಕಿನಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಬೈಂದೂರಿನ ಸೌಪರ್ಣಿಕಾ, ಸುಮನಾವತಿ, ಸಂಕದ ಗುಂಡಿ, ಎಡ ಮಾವಿನ ಹೊಳೆ ತುಂಬಿ ಹರಿಯುತ್ತಿವೆ, ನದಿ ಪಾತ್ರ, ನಾಡ, ನಾವುಂದ, ಮರವಂತೆ, ಬಡಾಕೆರೆ ಚಿಕ್ಕಳ್ಳಿ ಪಡುಕೋಣೆ ಆನಗಳ್ಳಿ ಹಳಗೇರಿ ಜನರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಪಶ್ಚಿಮ ಘಟ್ಟದಲ್ಲಿ ಮಳೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ.ಪ್ರತಿ ವರ್ಷ ಮಳೆಗಾಲ ಬಂದರೆ ನಮಗೆ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿನ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಹೆಚ್ಚುಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. , ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು ಎನ್ನುತ್ತಾರೆ ಸ್ಥಳೀಯರು.
ನಾವುಂದ, ಬಡಾಕೆರೆ,ಮರವಂತೆ ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಪ್ರತಿವರ್ಷದ ವಾರ್ಷಿಕ ಸಮಸ್ಯೆ. ಮಳೆಗಾಲದಲ್ಲಿ ಈ ಪ್ರದೇಶಗಳಿಗಾಗಿ ಮೂರ್ನಾಲ್ಕು ದೋಣಿ ಮೀಸಲಿಡಬೇಕು. ಅನಾರೋಗ್ಯ ಪೀಡಿತರನ್ನು ಚಿಕಿತ್ಸೆಗೆ ಕರೆದೊಯ್ಯಬೇಕಾದರೆ ಆಹಾರ ಸಾಮಾಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಸುಮಾರು ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸ. ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಯುವಕರ ತಂಡ ಸಹಿತ ದೋಣಿ ಚಲಾಯಿಸಲು ತಿಳಿದ ಹಲವು ಮಂದಿ ದೋಣಿ ಯಾನದ ಮೂಲಕ ಸಾರ್ವಜನಿಕರಿಗೆ ನೆರವಾಗುವ ಸಾಹಸಿಗಳಾಗಿ ಶ್ರಮದಾನ ಮಾಡುತ್ತಾರೆ
ನೆರೆ ಪಿಡಿತ ಪ್ರದೇಶಗಳಿಗೆ ಶಾಶ್ವತ ಪರಿಹಾರ ಇದುವರೆಗೂ ದೊರಕಿಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಸಾಲ್ಬುಡ ಮತ್ತು ಬಡಾಕೆರೆ ಪಡುಕೋಣೆ, ಮರವಂತೆ ರಸ್ತೆಗಳು ಎತ್ತರ ಮಾಡಿದರೆ ಸ್ವಲ್ಪಮಟ್ಟಿಗೆ ಈ ಪ್ರದೇಶ ಜನರಿಗೆ ಉಪಯೋಗವಾಗುತ್ತದೆ.
ಈ ಪ್ರದೇಶಗಳಲ್ಲಿ ಕೃಷಿಯೇ ಜೀವನಾಧಾರ. ಮಳೆಗಾಲದಲ್ಲಿ ನದಿಗಳು ಉಕ್ಕೇರುವುದಲ್ಲದೆ ಅವುಗಳ ಅಗಲವೂ ಹೆಚ್ಚುತ್ತದೆ. ನೆರೆ ನೀರಿನಲ್ಲಿ ಮನೆಗಳು ಮಾತ್ರವಲ್ಲ ಜಾನುವಾರುಗಳ ಹಟ್ಟಿಗಳೂ ನೀರಿನಲ್ಲಿ ಮುಳುಗುತ್ತವೆ. ಬೆಳೆ ಹಾನಿಯಾಗುತ್ತದೆ. ಹೈನುಗಾರರಿಗೆ ಹಾಲು ಪೇಟೆಗೆ ತರಲು ಸಾಧ್ಯವಾಗದೆ ಆದಾಯ ನಷ್ಟವಾಗುತ್ತದೆ. ಮಳೆ ಹದವಾಗಿ ಬಂದರೆ ಅದೊಂದು ದೃಶ್ಯ ಕಾವ್ಯ. ಅದೇ ಬೊಬ್ಬಿರಿದು, ಅಬ್ಬರಿಸಿ ಸುರಿದರೆ ಅನಾಹುತಗಳದೇ ಮೇಲುಗೈ.