ಮಂಗಳೂರಿನ ಮಣ್ಣಿನಲ್ಲಿ ಮತ್ತೊಮ್ಮೆ ರಕ್ತದ ಕಲೆಗಳು ಮೂಡಿವೆ. ಪ್ರಚೋದನಕಾರಿ ಭಾಷಣದ ವಿಷಬೀಜ ಬಿತ್ತಿದ ದ್ವೇಷದ ಗಾಳಿಯಲ್ಲಿ ಅಮಾಯಕ ಜೀವವೊಂದು ಉಸಿರುಗಟ್ಟಿದೆ. ಆ ಸಣಕಲು ದೇಹದ ವ್ಯಕ್ತಿ, ಬಹುಶಃ ತನ್ನದೇ ಆದ ಕನಸುಗಳನ್ನು ಹೊತ್ತಿದ್ದ, ತನ್ನ ಕುಟುಂಬದ ಆಧಾರವಾಗಿದ್ದ, ಕೇವಲ ತನ್ನ ಹೆಸರಿನ ಕಾರಣಕ್ಕೆ, ಆತನ ಧರ್ಮದ ಕಾರಣಕ್ಕೆ ಕ್ರೂರ ಗುಂಪಿನ ದಾಳಿಗೆ ಬಲಿಯಾಗಿದ್ದಾನೆ. ಆತನ ಕಣ್ಣುಗಳಲ್ಲಿ ಭಯದ ಕಾರ್ಮೋಡಗಳು ಕವಿಯುವ ಮುನ್ನ, ಆತನ ಬಾಯಿಂದ ಹೊರಬರುವ ಮೊದಲು, ಆತನನ್ನು ನಿರ್ದಯವಾಗಿ ಕೊಲ್ಲಲಾಗಿದೆ.
ಎ.27ರಂದು ಮಂಗಳೂರು ನಗರದ ಹೊರವಲಯದ ಕುಡುಪು ಸಮೀಪ ಹತ್ಯೆಗೊಳಗಾದವ ಮೊದಲು ಉತ್ತರ ಭಾರತದವನೆಂದು ಹೇಳಲಾಗುತಿದ್ದರೂ ಕೊನೆಗೂ ಕೇರಳದ ವಯನಾಡಿನವನೆಂದು ಪತ್ತೆ ಹಚ್ಚಲಾಗಿದೆ.
ಕೇರಳದಿಂದ ವಯನಾಡಿನಿಂದ ಆಗಮಿಸಿದ ಆತನ ಮನೆಮಂದಿ ಮೃತದೇಹವನ್ನು ಇಂದು ಬುಧವಾರ ಬೆಳಗ್ಗಿನ ಜಾವ ಕೊಂಡೊಯ್ದಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಕುಂಞಾಯಿ ಎಂಬವರ ಪುತ್ರ ಅಶ್ರಫ್ ಕೊಲೆಯಾದ ವ್ಯಕ್ತಿ. ಈ ಬಗ್ಗೆ ಮಾಹಿತಿ ಪಡೆದಿದ್ದ ಅಶ್ರಫ್ ಕುಟುಂಬಸ್ಥರು ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಅಶ್ರಫ್ ಅವರ ಸಹೋದರ ಸೇರಿದಂತೆ ಆಗಮಿಸಿದ್ದ ಮೂವರು ವೆನ್ಹಾಕ್ ಶವಾಗಾರದಲ್ಲಿರಿಸಿದ್ದ ಮೃತದೇಹ ಅಶ್ರಫ್ ಅವರದ್ದೆಂದು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಬಳಿಕ ಮೃತದೇಹವನ್ನು ಬಂದರ್ ಝೀನತ್ ಭಕ್ಸ್ ಕೇಂದ್ರ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಮಯ್ಯತ್ ನಮಾಝ್ ನಿರ್ವಹಿಸಿದ ಬಳಿಕ ಮುಂಜಾನೆ 4:30ರ ಸುಮಾರಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮಲಪ್ಪುರಂಗೆ ಕೊಂಡೊಯ್ಯಲಾಯಿತು.
ಈ ಸಂದರ್ಭ ಮಾಜಿ ಮೇಯರ್ ಕೆ.ಅಶ್ರಫ್, ಸುಹೈಲ್ ಕಂದಕ್, ಕೆ.ಕೆ.ಶಾಹುಲ್ ಹಮೀದ್, ಹರ್ಷಾದ್ ವರ್ಕಾಡಿ, ಬಿ.ಕೆ.ಇಯ್ತಿಯಾಝ್, ಸಂತೋಷ್ ಬಜಾಲ್, ಜಲೀಲ್ ಕೃಷ್ಣಾಪುರ, ರಿಯಾಝ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.
ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ತಂದೆ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದ ಅಶ್ರಫ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ನಂತರ ಮಾನಸಿಕ ಸಮಸ್ಯೆಗೆ ಒಳಗಾಗಿದ್ದರೆನ್ನಲಾಗಿದೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅಶ್ರಫ್ ಮನೆ ಬಿಟ್ಟು ಇದೇರೀತಿ ಆಗಾಗ್ಗೆ ಹೋಗುತ್ತಿದ್ದರು. ಸದ್ಯ ಅವರ ಮಂಗಳೂರಿನಲ್ಲಿ ಇರುವ ಬಗ್ಗೆ ತಮಗೆ ಮಾಹಿತಿ ಇತ್ತು ಎಂದು ಕೊಲೆಯಾದ ಅಶ್ರಫ್ ರ ತಮ್ಮ ಜಬ್ಬಾರ್ ನಮ್ಮ ಮೀಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ. ಮೇಯರೊಬ್ಬರ ಪತಿ ಸೇರಿದಂತೆ ಇನ್ನಷ್ಟು ಮಂದಿ ಆರೋಪಿಗಳ ಪಟ್ಟಿಯಲ್ಲಿ ಸೇರುವ ಸಾಧ್ಯತೆಗಳಿರುವುದಾಗಿ ಸೂಚನೆಗಳು ಕೇಳಿ ಬರುತ್ತಿದೆ