ಮಂಗಳೂರು: ಚಲಿಸುತ್ತಿದ್ದ ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಬಸ್ ನಿರ್ವಹಕನನ್ನು ತಕ್ಷಣ ನೇರವಾಗಿ ಸಮೀಪದ ಆಸ್ಪತ್ರೆಗೆ ಚಲಾಯಿಸಿ ಎಮರ್ಜೆನ್ಸಿ ಯಲ್ಲಿ ಕ್ಲಪ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ನಿರ್ವಾಹಕನ ಜೀವ ಉಳಿಸಿದ್ದಾರೆ. ಒಂದು ಜೀವ ಉಳಿಸಿದ ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚಿದ ಆಸ್ಪತ್ರೆಯ ಚೇರ್ ಮೆನ್ ಸೂಚನೆ ಮೇರೆಗೆ ಸಿಬ್ಬಂದಿ ಸನ್ಮಾಸಿದ್ದಾರೆ.
ಶುಕ್ರವಾರ ಬೆಳಗ್ಗೆ 8.00ಗಂಟೆ ಮುಡಿಪುವಿನಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಿರ್ವಾಹಕ ಸಂಜೀವ್ ಪ್ರಯಾಣಿಕರಿಗೆ ಟಿಕೆಟ್ ನೀಡಿ ದರ ವಸೂಲಿ ಮಾಡುತ್ತಿದ್ದನಂತೆ. ಸುಮಾರು ಒಂದೂವರೆ ಕಿ. ಮೀ. ಕ್ರಮಿಸಿದ್ದಷ್ಟೇ. ಕಂಬಳಪದವು ತಲುಪುತ್ತಿದ್ದಂತೆಯೇ ತಲೆ ಸುತ್ತಿದ ಹಾಗಾಗಿದ್ದು ಕಣ್ಣಲಿ ಧಾರಾಕಾರ ನೀರು ಹರಿದಾಡುತ್ತಿದ್ದು ಜನರು ನೋಡುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಅದೇ ಬಸ್ಸಿನ ಚಾಲಕ ಅವೀಶ್ ಮದರನ್ ಬಸ್ ನ್ನು ಕಂಬಳ ಪದವಿನಿಂದ ದೇರಳಕಟ್ಟೆ ಕಣಚೂರು ಆಸ್ಪತ್ರೆ ತನಕ ಜೀರೋ ಟ್ರಾಫಿಕ್ ಸಿಗ್ನಲ್ ನಲ್ಲಿ ಬಂದಂತೆ ಎಲ್ಲೂ ಕೂಡ ನಿಲುಗಡೆ ಕೊಡದೆ ಆಸ್ಪತ್ರೆಯ ಎಮರ್ಜೆನ್ಸಿ ದ್ವಾರದ ಬಳಿಗೆ ತಂದು ನಿಲ್ಲಿಸಿ ಸಮಯ ಪ್ರಜ್ಞೆ ಮೆರೆದ ಕಾರಣ ಜೀವನ್ಮರಣ ಹೋರಾಟದಲ್ಲಿದ್ದ ಬಸ್ ನಿರ್ವಾಹಕ ಬದುಕುಳಿದಿದ್ದಾರೆ. ಜೀವವೊಂದು ಬದುಕಿತು ಎಂದು ಪ್ರಯಾಣಿಕರು ಸಂತಸಗೊಂಡಿದ್ದಾರೆ. ಸಮಯ ಪ್ರಜ್ಞೆ ತೋರಿದ ಚಾಲಕನಿಗೆ ಆಸ್ಪತ್ರೆಯ ಚೇರ್ ಮೆನ್ ಡಾ. ಯು ಕೆ. ಮೋನು ಕಣಚೂರು ಅವರ ಸೂಚನೆಯ ಮೇರೆಗೆ ಆಸ್ಪತ್ರೆಯ ಪ್ರಮುಖರಾದ ಡಾ. ಇಸ್ಮಾಯಿಲ್ ಹೆಜಮಾಡಿ, ಡಾ. ವೆಂಕಟ್ ರಾಯ ಪ್ರಭು, ಅಶ್ರಫ್ ಚೆಂಬುಗುಡ್ಡೆ, ಅಸ್ಗರ್ ಸಮ್ಮುಖದಲ್ಲಿ ಸನ್ಮಾನಿಸಲಾಗಿದೆ.