ಪೌರಕಾರ್ಮಿಕರಿಗೆ ಮೀಸಲಿಟ್ಟ ಜಾಗ ಕಬಳಿಸಲು ಬಿಡುವುದಿಲ್ಲ: ಎಸ್.ಪಿ. ಆನಂದ ಎಚ್ಚರಿಕೆ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಮೀಸಲಿಟ್ಟಿರುವ ಜಾಗವನ್ನು ಕಬಳಿಸಲು ಬಿಡುವುದಿಲ್ಲ. ಈ ಜಾಗದ ವಿಚಾರದಲ್ಲಿ ಅನ್ಯಾಯ ಮುಂದುವರಿದರೆ ಸಂಘದ ವತಿಯಿಂದ ಕಾನೂನು ಹೋರಾಟ ಹಾಗೂ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಪಿ. ಆನಂದ ಎಚ್ಚರಿಕೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರಪಾಲಿಕೆಯಲ್ಲಿ ಸುಮಾರು 35 ವರ್ಷಗಳಿಂದ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಲ್ಲಿ ಶೇ. 90ರಷ್ಟು ಮಂದಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೇವಲ ಶೇ. 20ರಷ್ಟು ಕಾರ್ಮಿಕರು ಮಾತ್ರ ಸ್ವಂತ ಮನೆ ಹೊಂದಿದ್ದಾರೆ. ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಹಿಂದೆ ನಡೆಸಿದ ಹೋರಾಟಗಳ ಫಲವಾಗಿ ವಿವಿಧ ಹಂತಗಳಲ್ಲಿ ಜಾಗ ಮೀಸಲಿಡಲಾಗಿದೆ ಎಂದು ತಿಳಿಸಿದರು.

1985-86ರಲ್ಲಿ ಪಚ್ಚನಾಡಿ ಗ್ರಾಮದ ಬಸವನಗರದಲ್ಲಿ ಸುಮಾರು 200 ಪೌರಕಾರ್ಮಿಕರಿಗೆ ತಲಾ ಎರಡು ಸೆಂಟ್ಸ್‌ನಂತೆ ಒಟ್ಟು ನಾಲ್ಕು ಎಕರೆ ಜಾಗ ಮೀಸಲಿಡಲಾಗಿತ್ತು. ಈ ಪೈಕಿ ಸುಮಾರು 25 ಕುಟುಂಬಗಳು ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿವೆ. ಬಳಿಕ 1996-97ರಲ್ಲಿ ನಡೆದ ಹೋರಾಟದ ಫಲವಾಗಿ ಮಂಗಳಾ ಜ್ಯೋತಿಯ ಸರ್ವೆ ನಂ. 35/1ರಲ್ಲಿ ಪೌರಕಾರ್ಮಿಕರಿಗೆ ಜಾಗ ಮೀಸಲಿಡಲಾಗಿತ್ತು. ಆದರೆ, ಈ ಜಾಗದ ಕೆಲವು ಭಾಗಗಳನ್ನು ಕಾರ್ಪೊರೇಷನ್ ಕ್ವಾರ್ಟರ್ಸ್‌ನವರು ಹಾಗೂ ಇತರರು ಒತ್ತುವರಿ ಮಾಡಿಕೊಂಡಿದ್ದು, ಪೌರಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಜಾಗವನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

2021-22ರಲ್ಲಿ ಅಂದಿನ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರ ಅವಧಿಯಲ್ಲಿ ಯೆಕ್ಕೂರಿನ ಪರಿಶಿಷ್ಟರ ಜಾಗದಲ್ಲಿ ಸುಮಾರು 3.5 ಎಕರೆ ಸೇರಿದಂತೆ ಒಟ್ಟು 21 ಎಕರೆ ಜಾಗವನ್ನು ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರು ಮಾಡಲಾಗಿದೆ. ಪಚ್ಚನಾಡಿ, ಮಂಗಳಾ ಜ್ಯೋತಿ ಹಾಗೂ ಯೆಕ್ಕೂರು ಪ್ರದೇಶಗಳಲ್ಲಿ ಪೌರಕಾರ್ಮಿಕರ ವಸತಿಗಾಗಿ ಮೀಸಲಿಟ್ಟ ಜಾಗವನ್ನು ಎಲ್ಲಾ ಸಮುದಾಯಗಳ ಪೌರಕಾರ್ಮಿಕರಿಗೆ ಸರ್ಕಾರದ ಕಾನೂನು ಮತ್ತು ಆದೇಶಗಳ ಪ್ರಕಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮೀಸಲಿಟ್ಟ ಜಾಗದ ಕುರಿತು ಕೆಲವರು ವಿರೋಧ ವ್ಯಕ್ತಪಡಿಸಿ, ಸುಳ್ಳು ಮಾಹಿತಿ ನೀಡಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ತಪ್ಪು ಸಂದೇಶ ಹರಡುತ್ತಿದ್ದಾರೆ. ಪೌರಕಾರ್ಮಿಕರಿಗೆ ಸೇರಬೇಕಾದ ಜಾಗವನ್ನು ಬೇರೆ ಯಾರೂ ಕಬಳಿಸಲು ಅವಕಾಶ ನೀಡುವುದಿಲ್ಲ. ಇಂತಹ ಪ್ರಯತ್ನಗಳು ಮುಂದುವರಿದರೆ ಸಂಘವು ಕಾನೂನು ಹೋರಾಟದ ಜೊತೆಗೆ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಪ್ರಮುಖರಾದ ಶಶಿಕಲಾ, ವಿಜಯ, ಸುರೇಶ್ ಹಾಗೂ ಶೇಖರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!