ಮಧ್ವಾಚಾರ್ಯರ ಸಂದೇಶದಂತೆ ಬಡವರ ಸೇವೆ ದೇವರಿಗೆ ಸಲ್ಲಿಸುವ ತೆರಿಗೆ: ಡಾ. ರಾಜಗೋಪಾಲಾಚಾರ್

ಮಂಗಳೂರು, ಅ. 21: ಬಡ ಜನರಿಗೆ ಮಾಡುವ ಸೇವೆಯೇ ದೇವರಿಗೆ ಕಟ್ಟುವ ತೆರಿಗೆ ಎಂದು ಪರಿಗಣಿಸಬೇಕು. ಜನಸೇವೆಯನ್ನು ಉಪಕಾರವೆಂದು ಭಾವಿಸದೆ, ದೇವರಿಗೆ ಸಲ್ಲಿಸುವ ತೆರಿಗೆಯೆಂದು ಪರಿಗಣಿಸಬೇಕು ಎಂಬುದು ಮಧ್ವಾಚಾರ್ಯರು ನೀಡಿದ ಸಂದೇಶವಾಗಿದೆ ಎಂದು ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ರಾಜಗೋಪಾಲಾಚಾರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ತುಳುಭವನದಲ್ಲಿ ಮಂಗಳವಾರ ನಡೆದ ತತ್ವವಾದ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಮಧ್ವಾಚಾರ್ಯರ ಸಾಧನೆಗಳು ಹಾಗೂ ಅವರ ಸಂದೇಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಮಧ್ವಾಚಾರ್ಯರು ನಾಡು ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದು, ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಜಾತಿ, ಧರ್ಮ ಮೀರಿ ಎಲ್ಲರ ಏಳಿಗೆಯನ್ನು ಬಯಸಿದ್ದರು ಎಂದರು. ಜಯಂತಿ ಆಚರಣೆಗಳು ಸಮಾಜದ ಎಲ್ಲ ವರ್ಗಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಕಾರಿಯಾಗಬೇಕು ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಮಧ್ವಾಚಾರ್ಯರು ತುಳವರು ಹಾಗೂ ತುಳು ಭಾಷೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಕರ್ನಾಟಕ ಧಾರ್ಮಿಕ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೊರಿಯಾರ್ ವಂದಿಸಿದರು. ಗಣೇಶ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!