ಆಹಾರ ಸುರಕ್ಷತಾ ಅಧಿಕಾರಿಗಳು ನಗರದ ಕದ್ರಿ ದೇವಸ್ಥಾನದ ಬಳಿ ಇರುವ ಕುಡ್ಪೀಸ್ ಫುಡ್ಸ್ ಮಂಗಳೂರು ಇಲ್ಲಿಗೆ ಶನಿವಾರ ದಿಡೀರ್ ದಾಳಿ ನಡೆಸಿದರು.
ಆಹಾರ ಉತ್ಪಾದನಾ ಸ್ಥಳದಲ್ಲಿ ನೈರ್ಮಲ್ಯತೆಯ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಯಿತು ಹಾಗೂ ಅನೈರ್ಮಲ್ಯದಿಂದ ತಯಾರಿಸಲಾದ ಹಲ್ವಾ ಹಾಗೂ ಖರ್ಜೂರ ಉತ್ಪನ್ನಗಳನ್ನು ಸೀಸ್ ಮಾಡಿ ಸೀಲ್ ಮಾಡಿ ಇರಿಸಲಾಯಿತು ಹಾಗೂ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.
ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆಹಾರ ಉತ್ಪನ್ನಗಳನ್ನು ತಯಾರಿಸುವಂತೆ ಸೂಚಿಸಲಾಯಿತು.

ಯಾವುದೇ ರೀತಿಯ ಫುಡ್ ಪಾಯಿಸನಿಂಗ್ ಆಗಲು ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಲು, ಡ್ರೈನೇಜ್ ವ್ಯವಸ್ಥೆ ಸರಿಪಡಿಸಿ ಕೊಳ್ಳಲು, ಯಾವುದೇ ಕೀಟ, ಜಿರಳೆ ಇಲಿ ಹೆಗ್ಗಣಗಳು ತಯಾರಿಕಾ ಘಟಕದೊಳಗೆ ನುಸುಳಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಆಹಾರ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಶುಚಿಗೊಳಿಸಿದ ಬಳಿಕ ಆಹಾರ ಉತ್ಪನ್ನಗಳನ್ನು ತಯಾರಿಸುವಂತೆ ಸೂಚಿಸಲಾಯಿತು. ಅನೈರ್ಮಲ್ಯದಿಂದ ಕೂಡಿದ ಸಾಮಗ್ರಿಗಳನ್ನು ಸೀಜ್ ಮಾಡಿ ಸೀಲ್ ಮಾಡಲಾಯಿತು.

ಆರೋಗ್ಯ ಸಚಿವ ಯು ಟಿ ಖಾದರ್ ರವರ ಸೂಚನೆಯ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಎಚ್ ಇವರ ನೇತೃತ್ವದ ತಂಡ ದಾಳಿ ಯಲ್ಲಿ ಭಾಗವಹಿಸಿದ್ದರು.

