ಮಂಗಳೂರು:: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು: ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಸೆ.11ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು, ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ
ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ ವಂ. ಡಾ| ಎಲೋಶಿಯಸ್ ಪೌಲ್ ಡಿ’ಸೋಜರವರು ಭಾಗವಹಿಸಲಿದ್ದಾರೆ . ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದ ಮಣಿನಾಲ್ಕೂರುರವರಿಂದ ಪ್ರೀತಿಯ ಸಿಂಚನ’ ಎಂಬ ಸೌಹಾರ್ದ ಗಾಯನ’ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಎಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕರಾದ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ವಿಜೇತರಾದ ಕರಿಯ ಕೆ. ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ , ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಸಂತೋಷ್ ಡಿ’ಸೋಜ, ಸಂತ ಮದರ್ ತೆರೇಸಾ ವಿಚಾರ ವೇದಿಕೆ ಉಪಾಧ್ಯಕ್ಷ ಇಲಿಯಾಸ್ ಫೆರ್ನಾಂಡಿಸ್, ರೆಹಮಾನ್ ಖಾನ್ ಕುಂಜತ್ತಬೈಲ್, ದಲಿತ ಸಂಘಟನೆಯ ಯುವನಾಯಕ ರಾಕೇಶ್ ಕುಂದರ್, ಮಂಜುಳಾ ನಾಯಕ್, ಸುಮತಿ ಎಸ್. ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.