ಮಂಗಳೂರು :ಶಿಕ್ಷಕರ ಕಾರ್ಯಚಟುವಟಿಕೆಗಳಿಗೆ, ಅವರ ಸಂಘಗಳ ಸಭೆಗಳಿಗೆ ತಮ್ಮ ಕಚೇರಿಯನ್ನು ನೀಡುವುದಾಗಿ ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಭರವಸೆ ನೀಡಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದ ಮೊದಲ ಮಹಡಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಕಚೇರಿ ಗುರುವಾರದಂದು ವಿಧ್ಯುಕ್ತವಾಗಿ ಉದ್ಘಾಟನೆಯಾಯಿತು. ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಕಚೇರಿ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದು ಶುಭ ಹಾರೈಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಭೋಜೇಗೌಡ ಅವರು ತಾನು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಶಿಕ್ಷಕರ ಅನೇಕ ಸಮಸ್ಯೆಗಳ ಸಂದರ್ಭದಲ್ಲಿ ಸಮಾಲೋಚನೆಗೆ, ಶಿಕ್ಷಕರ ಸಂಘದ ಹಾಗು ಶೈಕ್ಷಣಿಕ ಚಟುವಟಿಕೆಗಳಿಗೆ ಈ ಕಚೇರಿ ಒದಗಿಸುವುದಾಗಿ ಹೇಳಿದರು. ತಮ್ಮ ವ್ಯಾಪ್ತಿ ಆರು ಜಿಲ್ಲೆಗಳನ್ನು ಹೊಂದಿದ್ದು, ಕೆ.ಡಿ.ಪಿ. ಸಭೆ ಸಹಿತ ವಿವಿಧ ಸರಕಾರಿ ಸಭೆ ಸಮಾರಂಭಗಳಿಗೆ ಮಂಗಳೂರಿಗೆ ಆಗಮಿಸುತ್ತಿರುತ್ತೇನೆ, ಇನ್ನು ಮುಂದೆ ಇಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಭೇಟಿ ನೀಡುತ್ತೇನೆ. ಶಿಕ್ಷಕರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಕೊಟ್ಟರೆ ಅದನ್ನು ಸ್ವೀಕರಿಸಿ ಫಾಲೋಅಪ್ ಮಾಡಲು ಈ ಕಚೇರಿ ಸಹಕಾರಿ ಆಗಲಿದೆ, ಇದರಿಂದ ಇಲ್ಲಿನ ಜನರ ಜೊತೆ ತಮ್ಮ ಒಡನಾಟ ಹೆಚ್ಚಲಿದೆ ಎಂದು ಹೇಳಿದರು.
ನೂತನ ಕಚೇರಿಯು ವೀಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಸಹಿತ ಆಧುನಿಕ ಸಂವಹನ ಹಾಗು ಇತರ ಸೌಲಭ್ಯಗಳನ್ನು ಹೊಂದಿದೆ..