ಕೇಂದ್ರದ ಬಿಜೆಪಿ ಸರಕಾರವು ಜಿಎಸ್ ಟಿಯನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ತೊಂದರೆಯನ್ನು ನೀಡಿದೆ-ಮಂಜುನಾಥ್ ಭಂಡಾರಿ

ಮಂಗಳೂರು: ಕೇಂದ್ರದ ಬಿಜೆಪಿ ಸರಕಾರವು ಜಿಎಸ್ ಟಿಯನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ತೊಂದರೆಯನ್ನು ನೀಡಿದೆ. ಕಳೆದ 8 ವರ್ಷಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಸಾಕಷ್ಟು ಸಮಸ್ಯೆ, ತೊಂದರೆಯನ್ನು ಅನುಭವಿಸಿದ್ದರು. ಜಿಎಸ್ ಟಿಯನ್ನು ಹೆಚ್ಚು ಮಾಡಿದ್ದು ಅವರೇ, ಈಗ ಕಡಿಮೆ ಮಾಡಿರುವುದೂ ಅವರೇ. ಇದಕ್ಕೆಲ್ಲಾ ಸಂಭ್ರಮದ ಆಚರಣೆಯ ಅಗತ್ಯ ಇದೆಯಾ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಜಿಎಸ್ ಟಿಯಿಂದ ಅದೆಷ್ಟೋ ಸಂಖ್ಯೆಯ ಕಂಪೆನಿಗಳು ನೆಲ ಕಚ್ಚಿದೆ, ಉದ್ದಿಮೆಗಳು ನಷ್ಟ ಅನುಭವಿಸಿವೆ. ಆವಾಗ್ಲೇ ಜಿಎಸ್ ಟಿಯನ್ನು ಸರಳೀಕರಣ ಮಾಡುತ್ತಿದ್ದರೆ ಆರ್ಥಿಕತೆ ಸುಧಾರಣೆ ಕಾಣುತ್ತಿತ್ತು. ಕಳೆದ 8 ವರ್ಷಗಳಲ್ಲಿ ಜನರಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆಯನ್ನು ಸಂಗ್ರಹ ಮಾಡಿದ್ದಾರೆ. 2014 ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿ ಕೊಂಡಿದ್ದರೆ ಜಿಎಸ್ ಟಿಯನ್ನು ಜಾರಿಗೆ ತರುತ್ತಿತ್ತು. ಚುನಾವಣೆಯ ಪ್ರಣಾಳಿಕೆಯಲ್ಲಿಯೂ ಈ ವಿಷಯ ಇದ್ದವು. ಇದು ಮಹಾನ್ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಕನಸಿನ ಕೂಸು ಕೂಡ ಆಗಿತ್ತು. ಆದರೆ ಮನಮೋಹನ್ ಸಿಂಗ್ ಅವರ ಪರಿಕಲ್ಪನೆಯ ಜಿ ಎಸ್ ಟಿ ಗೂ ಬಿಜೆಪಿ ಸರ್ಕಾರ ಜಾರಿಗೆ ತಂದ ಜಿ ಎಸ್ ಟಿ ಗೂ ಹಲವಾರು ವ್ಯತ್ಯಾಸಗಳಿವೆ ಎಂದರು.

ಮುಂದೆ ಬಿಹಾರ ಸೇರಿದಂತೆ ಇತರೇ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಎಲ್ಲಿ ಚುನಾವಣೆಯಲ್ಲಿ ಕಡಿಮೆ ಮತ ಸಿಗುತ್ತೋ ಎಂಬ ಭಯದಲ್ಲಿ ಜಿಎಸ್ ಟಿಯನ್ನು ಕಡಿಮೆ ಮಾಡಲಾಗಿದೆ ಎಂದು ಅವರು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಸ್ ಮುಹಮ್ಮದ್, ಸಾಹುಲ್ ಹಮೀದ್, ಎಸ್ ಅಪ್ಪಿ, ಇಬ್ರಾಹಿಂ ನವಾಜ್, ಸುಹಾನ್ ಆಳ್ವಾ, ಶುಭಶ್ಚಂದ್ರ ಶೆಟ್ಟಿ ಕೊಲ್ನಾಡ್, ಚಿತ್ತಾರಂಜನ್ ಶೆಟ್ಟಿ, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!