ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾಳಚಿಲ್ ಸಂಸ್ಥೆಯು ಅಂತರಾಷ್ಟ್ರೀಯ ಹ್ಯಾಕಥಾನ್ “Srinathon-25” ಕಾರ್ಯಕ್ರಮವನ್ನು ಅಕ್ಟೋಬರ್ 9 ಮತ್ತು 10 ರಂದು ಆಯೋಜಿಸುತ್ತಿದ್ದು, ಈ ಮೂಲಕ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ತರಿಸಿ, ನಿಜ ಜೀವನದ ಸವಾಲುಗಳಿಗೆ ನವೀನ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸಲಾಗುವುದು ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ ಶ್ರೀನಿವಾಸ ಮೈಯ ಡಿ ತಿಳಿಸಿದರು .
ಅವರು ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈವರೆಗೆ 114 ತಂಡಗಳು ಕಾರ್ಯಕ್ರಮಕ್ಕೆ ನೋಂದಾಯಿಸಿದ್ದು, Ulster University, Belfast, UK ನಿಂದಲೂ ಒಂದು ಅಂತಾರಾಷ್ಟ್ರೀಯ ತಂಡ ಭಾಗವಹಿಸುತ್ತಿರುವುದು ವಿಶೇಷ. ಇದು ಜಾಗತಿಕ ಸಹಕಾರ ಮತ್ತು ಜ್ಞಾನ ವಿನಿಮಯದತ್ತ ಮಹತ್ತರ ಹೆಜ್ಜೆಯಾಗಿದೆ ಎಂದರು.
24 ಗಂಟೆಗಳ ಅವಧಿಯ ಈ ಹ್ಯಾಕಥಾನ್ನಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ಸಂಸ್ಥೆಗಳಿಂದ ನೈಜ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ. ಸಂಸ್ಥೆಗಳಿಗೆ ಹೊಸ ದೃಷ್ಟಿಕೋನದ ಪರಿಹಾರ ಸಿಗುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ಅನುಭವ ದೊರೆಯಲಿದೆ ಎಂದರು.ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಶ್ರೀನಿವಾಸ ಮೈಯ್ಯ ಡಿ ಅವರ ನೇತೃತ್ವದಲ್ಲಿ, ಸಂಯೋಜಕರಾದ ಶೈಲೇಶ್ ಶೆಟ್ಟಿ ಹಾಗೂ ಡಾ. ಧೀರಜ್ ಹೆಬ್ರಿ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಸಿಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು , ಉಪಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ಹಾಗೂ ಎಥನೋಟೆಕ್ ಅಕಾಡೆಮಿ ಅಧ್ಯಕ್ಷರಾದ ಡಾ. ಕಿರಣ್ ರಾಜಣ್ಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು .ಕರ್ನಾಟಕದ ವಿವಿಧ ಭಾಗಗಳಿಂದ ಹಾಗೂ ವಿದೇಶದಿಂದಲೂ ತಂಡಗಳು ಭಾಗವಹಿಸುತ್ತಿರುವ ಈ ಹ್ಯಾಕಥಾನ್, ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಮತ್ತು ಉದ್ಯೋಗಾವಕಾಶಗಳ ದಾರಿಯಾಗುವ ನಿರೀಕ್ಷೆಯಿದೆ. “Srinathon-25” ನವೀನತೆ, ಸಹಕಾರ ಮತ್ತು ತಾಂತ್ರಿಕ ಶ್ರೇಷ್ಠತೆಯ ಉತ್ಸವವಾಗಿ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಬಲವಾದ ಸೇತುವೆಯಾಗಿ ಹೊರಹೊಮ್ಮುವ ವಿಶ್ವಾಸವನ್ನು ವ್ಯಕ್ತಪಡಿಸಿದರು .
ಸುದ್ದಿಗೋಷ್ಠಿಯಲ್ಲಿ ವಿಭಾಗ ಮುಖ್ಯಸ್ಥರಾದ ಡಾ ಧೀರಜ್ ಹೆಬ್ರಿ , ಸಂಯೋಜಕರಾದ ಶೈಲೇಶ್ ಶೆಟ್ಟಿ ಡಾ ಶೈಲೇಶ್ ಶೆಟ್ಟಿ , ಕೃತಿಕ್ , ಮನೀಶ್ ಶೆಟ್ಟಿ ಉಪಸ್ಥಿತರಿದ್ದರು .