ಮಂಗಳೂರು ನಗರ ಹೊರಲವಯದಲ್ಲಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕಿ ಭಾರತಿ ಜಿ, ರವಿ ಪೀರು ಪವಾರ್ ಹಾಗೂ ಉಡುಪಿ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯ್ಕ್ ಎಂ.ಎನ್. ಅವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಕಚೇರಿಯ ಸಿಬ್ಬಂದಿಯವರೊಂದಿಗೆ ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿ ಪ್ರಾಧಿಕಾರಕ್ಕೆ ಗೌರವಾನ್ವಿತ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಕೆಲವು ಲೋಪದೋಷಗಳು ಕಂಡುಬಂದಿದ್ದು, ಸರ್ಚ್ ಕಾರ್ಯಾಚರಣೆ ಮುಂದುವರಿದಿದೆ. ಸರಕಾರದಿಂದ ಮಂಜೂರಾದ ಅನುದಾನದ ದುರುಪಯೋಗ ನಡೆದಿದೆ ಎಂಬ ಆರೋಪವಿದ್ದು, ಆದಾಯ ಮತ್ತು ವೆಚ್ಚದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವುದಾಗಿ ವರದಿಯಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಲ್ಲದೆ ಮೃಗಾಲಯದ ಪ್ರಾಣಿಗಳ ಆಹಾರ ಸರಬರಾಜಿನಲ್ಲಿ ಕೂಡ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಮೃಗಾಲಯದ ನಿರ್ವಹಣೆಯಲ್ಲಿ ಭಾರೀ ಲೋಪದೋಷಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮೇ 23ರಂದು ಕೂಡ ಲೋಕಾಯುಕ್ತ ಅಧಿಕಾರಿಗಳು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಪಿಲಿಕುಳದ ಮೃಗಾಲಯ, ಗುತ್ತು ಮನೆ, ಮಾನಸ ವಾಟರ್ ಪಾರ್ಕ್, ಲೇಕ್ ಗಾರ್ಡನ್, ಸೈನ್ಸ್ ಮ್ಯೂಸಿಯಂ ಮುಂತಾದ ಘಟಕಗಳಲ್ಲಿ ಯಾವುದೇ ಅಕ್ರಮ ಅಥವಾ ಅವ್ಯವಹಾರ ಕಂಡುಬಂದರೆ, ಸಾರ್ವಜನಿಕರು 0824-2950997 ಗೆ ಅಥವಾ ನೇರವಾಗಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಎಂದು ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ, ಮಂಗಳೂರು ರವರು ತಿಳಿಸಿದ್ದಾರೆ.