ಮಕ್ಕಳ ಮನಸ್ಸಿನ ಒತ್ತಡಗಳು, ಅಂಕ ನಿರ್ಧಾರಿತ ಶಿಕ್ಷಣ ವ್ಯವಸ್ಥೆ, ಆತ್ಮವಿಶ್ವಾಸದ ಕೊರತೆ, ಇಂದಿನ ಸ್ಪರ್ಧಾ ಕಾಲಘಟ್ಟದಲ್ಲಿ ಎದುರಿಸಬಹುದಾದ ಕೀಳರಿಮೆ ಮನೋಭಾವ ಇವುಗಳ ಜೊತೆ ಇನ್ನೂ ಅನೇಕ ವಿಷಯಗಳು ಇಂದಿನ ಮಕ್ಕಳ ಕಲಿಕಾ ಮತ್ತು ಮಾನಸಿಕ ಒತ್ತಡಗಳಿಗೆ ಕಾರಣಗಳಾಗಿವೆ.ಇದರ ಸಲುವಾಗಿ ಮಂಚಿಯ ಕೊಳ್ನಾಡು – ಸಾಲೆತ್ತೂರು ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವತಿಯಿಂದ “ಮಾನಸಿಕ ಸ್ವಾಸ್ಥ್ಯ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವು” ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿತು.
ಕೊಳ್ನಾಡು – ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಉಮಾನಾಥ ರೈ ಮೇರಾವು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಗಾರವನ್ನು ಲಯನ್ಸ್ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಲಯನ್ ಡಾ. ಗೋಪಾಲ್ ಆಚಾರ್ ಮಂಚಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ “ಆಧುನಿಕ ತಂತ್ರಜ್ಞಾನಗಳು, ಸಮಾಜದಲ್ಲಾಗುತ್ತಿರುವ ವಿದ್ಯಮಾನಗಳು ವಿದ್ಯಾರ್ಥಿಗಳ ಕಲಿಕಾಕೇಂದ್ರಿತ ನಡೆಗಳಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಸುಸ್ಥಿರ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳ ಮನೋವಿಕಾಸದ ಹಾದಿಗೆ ಪರಿಣಾಮಕಾರಿ ಪ್ರಯತ್ನಗಳು ಶೈಕ್ಷಣಿಕ ವ್ಯವಸ್ಥೆಯಡಿಯಲ್ಲಿ ಆಗಬೇಕಾಗಿದೆ.” ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕೊಳ್ನಾಡು – ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಉಮಾನಾಥ ರೈ, “ಸಮಾಜ ಸೇವೆಯ ಭಾಗವಾಗಿ ನಾವು ಆಯೋಜಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪರವಾಗಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರಧಾನ ಪಾತ್ರವಾಗಬೇಕು. ಆ ಮೂಲಕ ಶಾಲಾ ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳಾಗಬೇಕು.” ಎಂದರು.
ಈ ಸಂದರ್ಭದಲ್ಲಿ ಕಾರ್ಯಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ನಿಟ್ಟೆ ವಿದ್ಯಾ ಸಂಸ್ಥೆಯ ಮಾನಸಿಕ ಆರೋಗ್ಯ ಸುಶ್ರೂಶ ವಿಭಾಗದ ಸಹಾಯಕ ಪ್ರೊಫೆಸರ್ ಶ್ರೀ ಸುಕೇಶ್ ಶೆಟ್ಟಿ ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಂವಾದ ಮತ್ತು ಚಟುವಟಿಕೆಗಳ ಮೂಲಕ ದಿನನಿತ್ಯದ ಜೀವನದಲ್ಲಿ ಮಕ್ಕಳು ಎದುರಿಸುವ ಸವಾಲುಗಳು ಮತ್ತು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಅಗತ್ಯ ಸಂಗತಿಗಳನ್ನು ತೆರೆದಿಟ್ಟರು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಕ್ಕಳ ಆಶಯದ ಭಾವನೆಗಳಿಗೆ ತೀರ್ಪು ನೀಡಿದರು. ಮಂಚಿ ಕೊಳ್ನಾಡು ಪ್ರೌಢಶಾಲೆಯ ಸುಮಾರು 280 ವಿದ್ಯಾರ್ಥಿಗಳು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.
ಸಭಾ ವೇದಿಕೆಯಲ್ಲಿ ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಕೋಶಾಧಿಕಾರಿ ಲಯನ್ ನಿಶ್ಚಲ್ ಜಿ ಶೆಟ್ಟಿ ಕಲ್ಲಾಡಿ, ಲಯನ್ ಜಿಲ್ಲಾ ಸಲಹೆಗಾರ ಲಯನ್ ಮನೋರಂಜನ್ ಕೆ ಆರ್, ಸೇವಾ ವಿಭಾಗದ ಸಂಯೋಜಕ ಲಯನ್ ಜಯಪ್ರಕಾಶ್ ರೈ ಮೇರಾವು ಉಪಸ್ಥಿತರಿದ್ದರು. ಲಯನ್ ದಿವಾಕರ ಶೆಟ್ಟಿ, ಲಯನ್ ರಾಜಲಕ್ಷ್ಮಿ ಮನೋರಂಜನ್ ಇವರು ಭಾಗವಹಿಸಿದರು.ಮಂಚಿ – ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಸುಶೀಲ ವಿಟ್ಲ ಸ್ವಾಗತಿಸಿ, ಕೊಳ್ನಾಡು ಸಾಲೆತ್ತೂರು ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ವಂದಿಸಿದರು. ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರ್ವಹಿಸಿದರು.