ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನವೆಂಬರ್ 16 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರುಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆಯ ಸುಸಂದರ್ಭದಲ್ಲಿ “ನಂದಿನಿ”. ಉತ್ಪನ್ನಗಳ ಶ್ರೇಣಿಗೆ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನವು ನೂತನವಾಗಿ ಬಿಡುಗಡೆಗೊಳ್ಳಲಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ತಿಳಿಸಿದರು.
ಅವರು ಕುಲಶೇಖರದ ಕೆ ಎಂ ಎಫ್ ಡೈರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ “ನಂದಿನಿ” ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುವುದೆಂದು ತಿಳಿಸಿದರು.
ನಂದಿನಿ ಸೀಡ್ಸ್ ಡಿಲೈಟ್ ಬಗ್ಗೆ ಮಾಹಿತಿಯನ್ನು ನೀಡಿ, ಒಕ್ಕೂಟವು ಆರೋಗ್ಯದಾಯಕವಾಗಿರುವ “ನಂದಿನಿ” ಸೀಡ್ಸ್ ಡಿಲೈಟ್ ಉತ್ಪನ್ನವನ್ನು ತಯಾರಿಸಲಾಗಿದ್ದು . ಇದು ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶ ನೀಡಲಿದೆ. ಹಾಗೆಯೇ ನಂದಿನಿ ಗುವಾ ಚೆಲ್ಲಿ ಲಸ್ಸಿಯು ಉತ್ಪನ್ನವನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ ಮತ್ತು “ನಂದಿನಿ” ಮೊಸರನ್ನು ಬಳಸಿ, ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದ್ದು, ಕ್ಯಾಲ್ಸಿಯಮ್, ವಿಟಮಿನ್ ಸಿ. ಪೊಟ್ಯಾಶಿಯಮ್ ಇತ್ಯಾದಿ ಪೋಷಕಾಂಶಗಳನ್ನು ಒಳಗೊಂಡಿದ್ದು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್, ನಿರ್ದೇಶಕರಾದ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಸುಧಾಕರ್ ಶೆಟ್ಟಿ, ಚಂದ್ರ ಶೇಖರ್ ರಾವ್, ಮಮತಾ ಶೆಟ್ಟಿ ಕುಂದಾಪುರ ಮುಂತಾದವರು ಉಪಸ್ಥಿತರಿದ್ದರು.