ಮಂಗಳೂರು: ಕರ್ನಾಟಕ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆ. ಉಜಿರೆ, ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿ., ಉಜಿರೆ ಹಾಗೂ ಕರ್ನಾಟಕ ರಾಜ್ಯದ ರಬ್ಬರು ಮಾರ್ಕೆಟಿಂಗ್ ಸೊಸೈಟಿಗಳ ಜಂಟಿ ಆಶ್ರಯದಲ್ಲಿ ನವೆಂಬರ್ 29 ರಂದು ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಪೂರ್ವಾಹ್ನ ೧೦ ರಿಂದ ರಾಜ್ಯಮಟ್ಟದ ಒಂದು ದಿನದ ರಬ್ಬರ್ ಬೆಳೆಗಾರರ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಶ್ರೀಧರ್ ಭಿಡೆ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ರಬ್ಬರ್ ಬೆಳೆಗಾರರ ದಶಕಗಳ ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಮ್ಮೇಳವನ್ನು ನಡೆಸುತ್ತೇವೆ . ಪ್ರಕೃತ ರಬ್ಬರಿನ ಧಾರಣೆಯ ಕುಸಿಯುತ್ತಿದ್ದು, ಪರಿಣಾಮವಾಗಿ ರಾಜ್ಯದಾದ್ಯಂತ ರಬ್ಬರು ಬೆಳೆಗಾರರು ರಬ್ಬರು ಮರಗಳನ್ನು ಕಡಿಯುತ್ತಿದ್ದಾರೆ. ಇದರೊಂದಿಗೆ ಹೆಚ್ಚಿನ ಬೆಳೆಗಾರರು ರಬ್ಬರು ಟ್ಯಾಪಿಂಗ್ ಮಾಡಲು ಹಿಂಜರಿಯುತ್ತಿದ್ದಾರೆ,
ರಬ್ಬರ್ ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿ ನಿರ್ವಹಣೆ ಮಾಡುವುದು ಕಷ್ಟ ಆಗುತ್ತಿದೆ , ಜೊತೆಗೆ ರಬ್ಬರ್ ಕೃಷಿಯನ್ನು ಈ ತನಕ ಕೃಷಿ ಇಲಾಖೆ ಅಥವಾ ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಸೇರಿಸಿಲ್ಲ.ಇದರಿಂದಾಗಿ ರಬ್ಬರ್ ಬೆಳೆಗಾರರಿಗೆ ಇತರ ಕೃಷಿ ಬೆಳೆಗಳಿಗೆ ದೊರಕುವ ಸರಕಾರಗಳ ಯಾವುದೇ ಸವಲತ್ತುಗಳು ದೊರಕುವುದಿಲ್ಲ ಎಂದರು .
ರಬ್ಬರಿನ ಧಾರಣೆ ಕುಸಿಯುತ್ತಿದ್ದರೂ ಕರ್ನಾಟಕದಲ್ಲಿ ಸರಕಾರ ಮಾರುಕಟ್ಟೆ ಮದ್ಯ ಪ್ರವೇಶ ಮಾಡಲು ಮುಂದಾಗಿಲ್ಲ. ಕೇರಳದಲ್ಲಿ ನವೆಂಬರ್ ತಿಂಗಳ ಒಂದನೇ ತಾರೀಕಿನಿಂದ ರಬ್ಬರಿನ ಬೆಲೆಯನ್ನು ಕಿಲೋ ಒಂದರ ರೂಪಾಯಿ 200 ಎಂದು ನಿಗದಿಪಡಿಸಿದೆ ಎಂದರು .
ತಮ್ಮ ಬೇಡಿಕೆಯನ್ನು ಮುಂದಿಟ್ಟು ಅವರು , ರಬ್ಬರ್ ಒಂದು ತೋಟಗಾರಿಕಾ ಬೆಳೆ ಎಂದು ಪರಿಗಣಿಸಬೇಕು, ರಬ್ಬರಿನ ಆಮದಿನ ಮೇಲಿನ ಸುಂಕವನ್ನು ಹೆಚ್ಚಿಸಬೇಕೆನ್ನುವ ಒಟ್ಟು ೬ ಬೇಡಿಕೆಯನ್ನು ಸರಕಾರದ ಮುಂದಿಟ್ಟರು . ಈ ಸಮಸ್ಯೆಗಳ ಪರಿಹಾರಕ್ಕಾಗಿ ಸಮ್ಮೇಳ ನಡೆಸುವುದಾಗಿ ಅವರು ಹೇಳಿದರು .
ಸಭಾ ಕಾರ್ಯಕ್ರಮದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ , ಸಂಸದರಾದ ಬ್ರಿಜೇಶ್ ಚೌಟ , ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಹಿರಿಯ ಅರ್ಥಶಾಸ್ತ್ರಜ್ಞರಾದ ಡಾ ವಿಘ್ನೇಶ್ವರ ವರ್ಮುಡಿ , ಪ್ರಸಾದ್ , ರಾಜೇಶ್ ಶೆಟ್ಟಿ ಸಹಿತ ಹಲವರು ಉಪಸ್ಥಿತರಿದ್ದರು.