ಮಂಗಳೂರು: ‘ಕಾಂತಾರ-1’ ಸಿನಿಮಾ ಯಶಸ್ಸಿನ ಸಂಭ್ರಮವು ಚಲನಚಿತ್ರರಂಗದಾಚೆಗೂ ದೈವ ನಂಬಿಕೆಯ ಮೈದಾನಕ್ಕೆ ವಿಸ್ತರಿಸಿದ್ದಂತಹ ದೃಶ್ಯ ಗುರುವಾರ ರಾತ್ರಿ ಮಂಗಳೂರಿನಲ್ಲಿ ಕಂಡುಬಂತು. ನಟ-ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಕುಟುಂಬ ಸಮೇತರಾಗಿ ಬಾರಬೈಲ್ ದೈವಸ್ಥಾನದಲ್ಲಿ ಹರಕೆಯ ಕೋಲ ಸಮರ್ಪಿಸಿದರು.
ವರಾಹ ಪಂಜುರ್ಲಿ, ಜಾರಂದಾಯ ಹಾಗೂ ಬಂಟ ದೈವಗಳಿಗೆ ನಡೆದ ಈ ನೇಮದಲ್ಲಿ ರಿಷಬ್ ಶೆಟ್ಟಿ ತಮ್ಮ ಮನದಾಳದ ಕೃತಜ್ಞತೆಯನ್ನು ದೈವಕ್ಕೆ ಅರ್ಪಿಸಿದರು. ‘ಕಾಂತಾರ’ ಸಿನಿಮಾದಲ್ಲಿ ದೈವ-ನಂಬಿಕೆ ಮಹತ್ವದ ಅಂಶವಾಗಿದ್ದುದರಿಂದ, ಚಿತ್ರದ ಯಶಸ್ಸಿನ ನಂತರ ಈ ಹರಕೆ ನೆರವೇರಿಸುವುದು ವಿಶಿಷ್ಟ ಅರ್ಥವನ್ನೂ ಪಡೆಯಿತು.
ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದ ನೇಮದಲ್ಲಿ ಭಾಗವಹಿಸಿದ್ದ ರಿಷಬ್ ಶೆಟ್ಟಿಗೆ, ದೈವ “ಜಾಗರೂಕತೆಯಿಂದಿರಿ, ನನ್ನ ಬೆಂಗಾವಲು ನಿಮಗಿದೆ” ಎಂಬ ಅಭಯ ವಾಕ್ಯ ದೊರೆತಿತ್ತು. ಆ ಆಶೀರ್ವಾದದ ನೆನಪಿನಲ್ಲಿ, ತಮ್ಮ ಹರಕೆಯನ್ನು ನೆರವೇರಿಸಿ ಮತ್ತೊಮ್ಮೆ ದೈವಕ್ಕೆ ನಮಿಸಿದರು.