ತಿರುವನಂತಪುರ : ಸರಕಾರವು ಸರಕಾರಿ ಶಾಲೆಗಳ ಗುಣಮಟ್ಟವನ್ನು ಮೇಲ್ದರ್ಜೆಗೆ ಏರಿಸಿ ನೂತನ ವಿವಿಧ ಯೋಜನೆಗಳನ್ನು ರೂಪಿಸಿ ಪರಿಚಯಿಸಿದರೂ, ಇತ್ತೀಚಿನ ವರ್ಷಗಳಲ್ಲಿ ಸುನಾಮಿಯಂತೆ ಬರುತ್ತಿರುವ ಕೆಲವು ಬೇನಾಮಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳಿಂದಾಗಿ ಕೆಲವು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವು ತೀರಾ ಕುಂಠಿತವಾಗಿದೆ.
ಹೆಚ್ಚಿನ ಖಾಸಗಿ ವಿದ್ಯಾ ಸಂಸ್ಥೆಗಳು ವಿವಿಧ ರಾಜಕೀಯ ಪಕ್ಷದ ಉನ್ನತ ನಾಯಕರ ಆಡಳಿತದಲ್ಲಿ ಕಾರ್ಯಾಚರಿಸುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾದ ವರದಿಯನ್ನ ತಯಾರಿಸಿ ಸುಲಭವಾಗಿ ರಾಜ್ಯ ಸರ್ಕಾರದಿಂದ ಅನುಮತಿ ಪತ್ರ ( NOC) ಪಡೆದು ಕೇಂದ್ರ ಪಠ್ಯಕ್ರಮ (CBSE) ಸೇರಿದಂತೆ ಇನ್ನಿತರ ಅಂಗೀಕಾರಗಳನ್ನು ಪಡೆಯುತ್ತಾರೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಆಡಂಬರಕ್ಕೆ ಮಾರುಹೋಗುವ ಹೆಚ್ಚಿನ ರಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ.
ಆಶ್ಚರ್ಯವೆಂದರೆ ಹೆಚ್ಚಿನ ಸರಕಾರಿ ಸಿಬ್ಬಂದಿಗಳ ಮಕ್ಕಳೇ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಸರಕಾರಿ ಶಾಲೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಕೆಲವು ಸೀಮಿತ ವರ್ಗಕ್ಕೆ ಮೀಸಲಾಗಿದೆ. ಮುಂದಿನ ದಿನಗಳಲ್ಲಿ ಸರಕಾರಿ ಸಿಬ್ಬಂದಿಗಳ ಮಕ್ಕಳು ಸರಕಾರಿ ಶಾಲೆಯಲ್ಲೇ ಶಿಕ್ಷಣ ಪಡೆಯಬೇಕೆಂಬ ನಿಯಮವನ್ನು ರೂಪಿಸಬೇಕಿದೆ.
ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಪಾವತಿಸುವ ಶುಲ್ಕವು ಸರಕಾರದಿಂದಲೇ ದೊರೆಯುತ್ತಿರುವುದು ವಿಪರ್ಯಾಸವಾಗಿದೆ. ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಅಂಗೀಕಾರ ಪಡೆಯಲು ಕೆಲವು ಕಟ್ಟುನಿಟ್ಟಿನ ನಿಯಮಗಳಿದ್ದರೂ ರಾಜಕೀಯ ಹಿತಾಸಕ್ತಿಯಿಂದ ಅನುಮತಿಯನ್ನು ಪಡೆಯಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆಗಳು ತೀವ್ರಗತಿಯಲ್ಲಿ ಏರುತ್ತಿದ್ದು ಸರಕಾರಿ ಶಾಲೆಗಳು ನೂತನ ಪ್ರವೇಶದ ಭೀತಿಯನ್ನು ಎದುರಿಸುತ್ತಿದೆ. ಇದಕ್ಕೆ ಶಾಶ್ವತವಾದ ಪರಿಹಾರವನ್ನು ಮಾಡಿದ್ದಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವುದರ ಜೊತೆಗೆ ವಿದ್ಯಾರ್ಥಿಗಳ ಪ್ರವೇಶದ ಸಂಖ್ಯೆಯಲ್ಲೂ ಏರಿಕೆ ಮಾಡಬಹುದಾಗಿದೆ.