ಮಂಜೇಶ್ವರ: ಕೇಳಿದ್ದ ಸಾಮಾನು ನೀಡಲಿಲ್ಲ ಎಂಬ ಅಸಮಾಧಾನದಿಂದ ಅಂಗಡಿಗೆ ದಾಳಿ ನಡೆಸಿದ ಆರೋಪದ ಮೇಲೆ ತಂದೆ ಮತ್ತು ಇಬ್ಬರು ಮಕ್ಕಳ ಸೇರಿದಂತೆ ನಾಲ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಪೇರಾಲ್ ನಿವಾಸಿಗಳಾದ ಸದಾಶಿವ (48), ಅವರ ಪುತ್ರರಾದ ಶ್ರವಣ್‌ರಾಜ್ (21) ಮತ್ತು ಸುದರ್ಶನ್ (25), ಜೊತೆಗೆ ಸಂಬಂಧಿಕ ಶರತ್ ಕುಮಾರ್ (26) ಬಂಧಿತರು. ಕುಂಬಳೆ ಠಾಣೆಯ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಘಟನೆ ಕಳೆದ ಶನಿವಾರ ಸಂಜೆ ಸುಮಾರು 7.30ರ ವೇಳೆಗೆ ಮೊಗ್ರಾಲ್ ಪೇರಾಲ್‌ನಲ್ಲಿರುವ ಸಿ.ಎಂ. ಸ್ಟೋರ್ಸ್ ಅಂಗಡಿಯಲ್ಲಿ ನಡೆದಿದ್ದು, ಅಂಗಡಿಗೆ ನುಗ್ಗಿದ ಆರೋಪಿಗಳು ಅಲ್ಲಿ ಗಲಾಟೆ ನಡೆಸಿ ವಸ್ತುಗಳಿಗೆ ಹಾನಿ ಮಾಡಿರುವುದಾಗಿ ದೂರಲಾಗಿದೆ. ಈ ವೇಳೆ ಅಂಗಡಿ ಮಾಲಕ ಅಬ್ದುಲ್ ರಹ್ಮಾನ್ (26) ಹಾಗೂ ಅವರ ಸಹೋದರ ಬಿ.ಎಂ. ರಿಫಾಯಿ (19) ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಲ್ಲದೆ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಲಾಗಿದೆ.
ಆರೋಪಿಗಳ ದಾಳಿಯಿಂದ ಅಂಗಡಿಯಲ್ಲಿ ಇರುವ ಸುಮಾರು 25 ಸಾವಿರ ರೂ. ಮೌಲ್ಯದ ಸಾಮಗ್ರಿಗಳು ನಾಶಗೊಂಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದಾಶಿವ, ಸುದರ್ಶನ್ ಮತ್ತು ಶರತ್ ಕುಮಾರ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶ್ರವಣ್‌ರಾಜ್‌ಗೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.