ಉಪ್ಪಳದಲ್ಲಿ 180 ವರ್ಷಗಳ ಪರಂಪರೆಯ ಆವಳಾ ಅಬ್ದುಲ್ ಖಾದರ್ ಉಪ್ಪಾಪ ಕುಟುಂಬ ಸಮ್ಮಿಲನ

ಉಪ್ಪಳ: ಉಪ್ಪಳದ ಫೆರೋ ಹಾಲಿನಲ್ಲಿ ಸುಮಾರು 180 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಆವಳಾ ಅಬ್ದುಲ್ ಖಾದರ್ ಉಪ್ಪಾಪ ಅವರ ಕುಟುಂಬ ಪರಂಪರೆಯ ಭವ್ಯ ಕುಟುಂಬ ಸಮ್ಮಿಲನವು ನಡೆಯಿತು. ಈ ಕುಟುಂಬ ಸಮ್ಮಿಲನದ ಅಧ್ಯಕ್ಷತೆಯನ್ನು ಕುಟುಂಬದಲ್ಲಿರುವ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿರುವ ಅಬ್ದುಲ್ ಖಾದರ್ ಹಾಜಿ ಪಂಜರವರು ಅಲಂಕರಿಸಿದರು.

ದುಆ ಮತ್ತು ಕಿರಾಅತ್‌ನೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳನ್ನು ಶಕೀಲ್ ಮಂಗಳೂರು ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮುನೀರ್ ಬಾಯಾರ್ ಅವರು ನೆರವೇರಿಸಿದರು. ಸಮ್ಮಿಲನದ ಅಧ್ಯಕ್ಷೀಯ ಭಾಷಣವನ್ನು ಇಬ್ರಾಹೀಂ ಖಲೀಲ್ ಆವಳಾ ಅವರು ನೆರವೇರಿಸಿದರು. ಕುಟುಂಬ ಸಂಬಂಧಗಳ ಮಹತ್ವದ ಕುರಿತು ಮುಖ್ಯ ಪ್ರಭಾಷಣಗಾರ ಖಲೀಲ್ ಹುದವಿಯವರು ಮನೋಜ್ಞವಾಗಿ ಪ್ರಭಾಷಿಸಿದರು.

ಈ ಸಂದರ್ಭದಲ್ಲಿ ಆವಳಾ ಅಬ್ದುಲ್ ಖಾದರ್ ಉಪ್ಪಾಪ ಅವರ ಕುಟುಂಬ ಪರಂಪರೆಯ ಮೂರನೇ ತಲೆಮಾರಿನ ಎಲ್ಲಾ ಸದಸ್ಯರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಕುಟುಂಬದ ಕಿರಿಯ ಮಕ್ಕಳಿಂದ ಕುರ್‌ಆನ್ ಪಠಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಜ್ಞವಾಗಿ ನಡೆಯಿತು. ಜೊತೆಗೆ ಕುಟುಂಬ ಪರಂಪರೆಯ ಅವಲೋಕನವಾಗಿ, ಅಬ್ದುಲ್ ಖಾದರ್ ಉಪ್ಪಾಪ ಅವರ ಮಕ್ಕಳ ಸಂಕ್ಷಪ್ತ ವಿವರಣೆ ಮತ್ತು ಕುಟುಂಬದ ಎಂಟು ತಲಮಾರುಗಳ ವಂಶವೃಕ್ಷದ ಸಂಪೂರ್ಣ ವಿವರಗಳನ್ನು ದೃಶ್ಯ ಮಾಧ್ಯಮದ ಮೂಲಕ ಸುಸ್ಪಷ್ಟವಾಗಿ ಪ್ರದರ್ಶಿಸಿ ವಿವರಿಸಲಾಯಿತು.

ಈ ಸಂಪೂರ್ಣ ಕಾರ್ಯಕ್ರಮವನ್ನು ಮುಸ್ತಫಾ ಸಅದಿಯವರು ಬಹಳ ಸುಂದರವಾಗಿ ಹಾಗೂ ಸಮರ್ಥವಾಗಿ ನಿರೂಪಿಸಿದರು.
ಬೆಳಗಿನ ಲಘು ಉಪಹಾರದಿಂದ ಆರಂಭಿಸಿ ಮಧ್ಯಾಹ್ನದ ಊಟ, ಚಹಾ–ತಿಂಡಿ ವ್ಯವಸ್ಥೆ ಹಾಗೂ ಮಕ್ಕಳಿಗೆ ಆಟವಾಡಲು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಸಮಿತಿಯವರು ಅತ್ಯುತ್ತಮವಾಗಿ ಏರ್ಪಡಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!