ಮಂಜೇಶ್ವರ: ಹೊಸಂಗಡಿಯ ಲಾಡ್ಜ್‌ನಲ್ಲಿ ಯುವಕ ಮತ್ತು ಅತನ ಮಹಿಳಾ ಸ್ನೇಹಿತೆಯ ಮೇಲೆ ದಾಳಿ ನಡೆಸಿ, ಅವರನ್ನು ಒಟ್ಟಿಗೆ ಕುಳ್ಳಿರಿಸಿ ಅಶ್ಲೀಲ ಚಿತ್ರ ಹಾಗೂ ವೀಡಿಯೊಗಳನ್ನು ತೆಗೆದು ಬೆದರಿಕೆ ಹಾಕಿ ಹಣ ಹಾಗೂ ಮೊಬೈಲ್ ಫೋನ್ ದೋಚಿದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ಪಿರಾರಮೂಲ ನಿವಾಸಿ ಹಾಗೂ ಕಡಂಬಾರು ನಿವಾಸಿಯಾಗಿರುವ ಹಾರಿಸ್ (40) ಬಂಧಿತ ಆರೋಪಿ.
ಮಂಜೇಶ್ವರ ಪೊಲೀಸರು ಮಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಮಂಗಳೂರಿನಲ್ಲಿ ಇದ್ದಾರೆಂಬ ಮಾಹಿತಿ ಮೇರೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಒಬ್ಬ ಆರೋಪಿಯು ಪರಾರಿಯಾಗಿದ್ದಾನೆ.
ಕಳೆದ ಬುಧವಾರ ಮಧ್ಯಾಹ್ನ 12ರ ಸುಮಾರಿಗೆ ಉಳ್ಳಾಲ ಮೊಂಟುಗುಳಿಯ ಮೊಹಮ್ಮದ್ ಹನೀಫ್ (40) ಮತ್ತು ಅವನ ಮಹಿಳಾ ಸ್ನೇಹಿತೆ ಹೊಸಂಗಡಿಯ ಲಾಡ್ಜ್‌ನಲ್ಲಿ ಕೊಠಡಿ ಪಡೆದಿದ್ದರು. ಈ ವೇಳೆ ಮೂವರ ತಂಡ ಬಲವಂತವಾಗಿ ಒಳನುಗ್ಗಿ, ಇಬ್ಬರ ಅಶ್ಲೀಲ ಚಿತ್ರಗಳನ್ನು ತೆಗೆದು, ಎರಡು ಲಕ್ಷ ರೂಪಾಯಿ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿ, ಮೊಬೈಲ್ ಹಾಗೂ 5,000 ರೂ. ನಗದು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.