ಹಿಂದೂ ಸಮಾಜ ಸಂಘಟಿತನಾದಾಗಲೇ ಶಾಂತಿ–ಸಾಮರಸ್ಯ ಸಾಧ್ಯ: ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕ ಅರುಣ್ ಕುಮಾರ್

ಬಂಟ್ವಾಳ: ಹಿಂದೂ ಚೆನ್ನಾಗಿರುವಲ್ಲಿ ಯಾವುದೇ ಸಮಸ್ಯೆ ಇಲ್ಲವಾಗಿದ್ದು, ಹಿಂದೂ ದುರ್ಬಲನಾದಾಗ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ಹಿಂದೂ ಸಮಾಜ ಸಂಘಟಿತನಾದಾಗ ಜಗತ್ತಿನಲ್ಲಿ ಶಾಂತಿ- ಸಾಮರಸ್ಯ ನೆಲೆಸುವುದಕ್ಕೆ ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕ ಅರುಣ್ ಕುಮಾರ್ ಹೇಳಿದರು.

ಅವರು ರವಿವಾರ ಸಂಜೆ ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನ ವಠಾರದಲ್ಲಿ ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಫರಂಗಿಪೇಟೆ ಮಂಡಲದ ವತಿಯಿಂದ ನಡೆದ ಹಿಂದೂ ಸಂಗಮ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.ಪ್ರಸ್ತುತ ಜಾಗತಿಕ ಗೂಂಡಾಗಿರಿ ನಡೆಯುತ್ತಿದ್ದು, ಸಾಕಷ್ಟು ದೇಶಗಳು ಹೊಡೆತಗಳನ್ನು ತಿಂದಿವೆ. ಆದರೆ ಭಾರತ ತನ್ನ ಪರಿಮಾಣು ಶಕ್ತಿಯ ಫಲವಾಗಿ ಭದ್ರವಾಗಿದೆ. ದೇಶದೊಳಗಿನ ವಿಕೃತ ಮನಸ್ಸುಗಳು ಕೂಡ ದೇಶದ ನಾಯಕತ್ವವನ್ನು ಪ್ರಶ್ನಿಸಿ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಚೋದಿಸುವ ಕಾರ್ಯ ನಡೆಯುತ್ತಿದೆ.


ಹಲವು ಕಾರಣಕ್ಕೆ ಹಿಂದೂ ಸಮಾಜದ ಮೇಲೆ ದಾಳಿಗಳು ನಡೆಯುತ್ತಿದ್ದು, ನಮ್ಮ ಕುಟುಂಬದ ಮಂದಿ ಒಗ್ಗಟ್ಟಾಗಿ ಕೂತು ಮುಂದಿನ ೨೫ ವರ್ಷಗಳ ಬಳಿಕ ನಮ್ಮ ಅಸ್ತಿತ್ವದ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ಸೂರ್ಯ- ಚಂದ್ರ ಇರುವವರೆಗೂ ಹಿಂದೂ ಸಮಾಜ ಇರಲಿದ್ದು, ಹೀಗಾಗಿ ಎಲ್ಲಾ ರೀತಿಯ ಆತಂಕಗಳನ್ನು ಬಿಟ್ಟು ಸಂಘಟಿತರಾಗಿ ನಮ್ಮ ಸಂಸ್ಕೃತಿ- ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಬೇಕಿದೆ ಎಂದರು.

ಪುದು ಗೋವಿನತೋಟ ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ದಾಸ್ ಪ್ರಭೂಜಿ ಅವರು, ಭಗವಂತನ ಅವತಾರಗಳು ಭಾರತದಲ್ಲೇ ಆಗಿದ್ದು, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನಾವು ಧನ್ಯರು. ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳನ್ನು ಪಾಲಿಸಿದಾಗ ನಮ್ಮ ಹಿಂದೂ ಧರ್ಮ ಕೂಡ ಉಳಿಯುತ್ತದೆ. ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸಿ ಧರ್ಮವನ್ನು ರಕ್ಷಣೆಯ ಕಾರ್ಯ ಮಾಡೋಣ ಎಂದರು.

ಮಹಿಳಾ ವಕ್ತಾರೆ ಲತಾ ಶ್ರೀನಿವಾಸ್ ತುಂಬೆ ಮಾತನಾಡಿ, ಹಿಂದೂ ಸಮಾಜ ಆಧುನಿಕತೆಯ ಭರಾಟೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದು, ನಮ್ಮ ಹಬ್ಬ- ಹರಿದಿನಗಳನ್ನು ಮರೆತು ಬಿಟ್ಟಿದ್ದೇವೆ. ಮೊಬೈಲ್ ಸ್ಟೇಟಸ್, ರೀಲ್ಸ್ ಗಳಲ್ಲಿ ಬ್ಯುಸಿಯಾಗಿದ್ದು, ದೈವ- ದೇವರ ಕಾರ್ಯಕ್ರಮಗಳನ್ನೂ ಚಿತ್ರೀಕರಣ ಮಾಡುವುದರಲ್ಲಿ ತೊಡಗಿದ್ದೇವೆ. ನಮಗೆ ನಾವೇ ಶತ್ರುಗಳಾಗುವ ಬದಲು ಎಚ್ಚೆತ್ತುಕೊಂಡು ಬದಲಾಗುವುದು ಅನಿವಾರ್ಯವಾಗಿದೆ ಎಂದರು.ಬಂಟ್ವಾಳ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯ ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕರ್ಪೆ ವೇದಿಕೆಯಲ್ಲಿದ್ದರು.

ಪ್ರಾರಂಭದಲ್ಲಿ ಕಡೆಗೋಳಿ ಜಂಕ್ಷನ್ ನಿಂದ ನಡೆದ ಶೋಭಾಯಾತ್ರೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಉದ್ಘಾಟಿಸಿದರು.ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ರೈ ಪ್ರಸ್ತಾವನೆಗೈದರು. ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರ್ವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!