ಮಂಗಲ್ಪಾಡಿಯಲ್ಲಿ ಅಪಾಯಕರ ಸೇತುವೆ: ತಕ್ಷಣ ನವೀಕರಣಕ್ಕೆ ಸ್ಥಳೀಯರ ಒತ್ತಾಯ

ಉಪ್ಪಳ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪ್ರಮುಖ ಜಲಸ್ರೋತಗಳಲ್ಲಿ ಒಂದಾದ ಸ್ವರ್ಣಗಿರಿ ತೋಡಿನ ಮೇಲೆ ನಿರ್ಮಿಸಲಾದ ಮಾಣಿಬಿತ್ತಿಲು ವಿ.ಸಿ.ಬಿ ಕಮ್ ಬ್ರಿಡ್ಜ್ ಗಂಭೀರ ಜೀರ್ಣಾವಸ್ಥೆಗೆ ತಲುಪಿದ್ದು, ಕುಸಿತದ ಭೀತಿಯನ್ನು ಎದುರಿಸುತ್ತಿದೆ.ನಾಲ್ಕು ದಶಕಕ್ಕೂ ಹೆಚ್ಚು ಹಳೆಯದಾದ ಈ ಸೇತುವೆಯನ್ನು ನವೀಕರಿಸಿ ಮರುನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮುಟ್ಟಂ,ಬೇರಿಕೆ ಹಾಗೂ ಕುಕ್ಕಾರ್ ಭಾಗದ ನೂರಾರು ಎಕರೆ ಕೃಷಿಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮೈನರ್ ಇರಿಗೇಷನ್ ಅಣೆಕಟ್ಟು ಹಾಗೂ ಅದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ–ಸೇತುವೆಯನ್ನು ನಿರ್ಮಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಬೇರಿಕೆ ಕಡಲತೀರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲೇ ಈ ಮಾನಿಬಿತ್ತಿಲು ಸೇತುವೆ ಇರುವುದರಿಂದ, ಶಾಲಾ ಬಸ್‌ಗಳು ಸೇರಿದಂತೆ ನೂರಾರು ವಾಹನಗಳು ಪ್ರತಿದಿನ ಈ ಮಾರ್ಗದಲ್ಲಿ ಭೀತಿಯಿಂದ ಸಂಚರಿಸುತ್ತಿವೆ.ಸೇತುವೆ ಸಂಪೂರ್ಣವಾಗಿ ಹಾಳಾಗಿದ್ದು, ಕಂಬಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕೆಳಭಾಗದ ಸ್ಲ್ಯಾಬ್‌ಗಳು ಕುಸಿದು ಒಳಗಿನ ಕಬ್ಬಿಣದ ಕಂಬಿಗಳು ಹೊರಬಂದ ಸ್ಥಿತಿಯಲ್ಲಿವೆ. ಕೆಲವೆಡೆ ಕಂಬಗಳ ಭಾಗಗಳು ಉದುರಿ ತೋಡಿನೊಳಗೆ ಬಿದ್ದಿರುವುದೂ ಕಂಡುಬಂದಿದೆ.

ಈ ಸ್ಥಿತಿ ಮುಂದುವರಿದರೆ ಯಾವುದೇ ಸಮಯದಲ್ಲಾದರೂ ಸೇತುವೆ ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ . ರಾತ್ರಿ ವೇಳೆ ಮರಳು ಸಾಗಿಸುವ ಲಾರಿಗಳ ನಿರಂತರ ಸಂಚಾರ ಸೇತುವೆಯ ಜೀರ್ಣಾವಸ್ಥೆಗೆ ಮತ್ತಷ್ಟು ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಅಪಾಯಕರ ಸ್ಥಿತಿಯಲ್ಲಿರುವ ಈ ಸೇತುವೆಯನ್ನು ಸಂಪೂರ್ಣವಾಗಿ ತೆರವುಗೊಳಿಸಿ, ವೈಜ್ಞಾನಿಕ ರೀತಿಯಲ್ಲಿ ಹೊಸ ಅಣೆಕಟ್ಟು–ಕಮ್–ಬ್ರಿಡ್ಜ್ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

SHARE
Loading spinner

3 thoughts on “ಮಂಗಲ್ಪಾಡಿಯಲ್ಲಿ ಅಪಾಯಕರ ಸೇತುವೆ: ತಕ್ಷಣ ನವೀಕರಣಕ್ಕೆ ಸ್ಥಳೀಯರ ಒತ್ತಾಯ

Leave a Reply

Your email address will not be published. Required fields are marked *

error: Content is protected !!