ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ-ಕುಟೀರದ ನಿರ್ಮಾಣಕ್ಕೆ ಚಾಲನೆ

ಕಾಸರಗೋಡು: ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕರಾದ ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಗೋ-ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮಹತ್ವದ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.

2025ರ ನವೆಂಬರ್ 4ರಂದು ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ **“ಕಾಸರಗೋಡು ಗೋ-ಕುಟೀರ”**ಕ್ಕೆ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೂಮಿ ಪೂಜೆ ನೆರವೇರಿಸಿ, ಗೋ-ಕುಟೀರ ನಿರ್ಮಾಣ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು.

ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವ ಹಾಗೂ ದೇಸಿ ಗೋವುಗಳ ಸಂರಕ್ಷಣೆ, ಪೋಷಣೆಗಾಗಿ ಕಾಸರಗೋಡು ಗೋ-ಕ್ಷೇತ್ರ – ಗೋ-ಕುಟೀರವನ್ನು ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ರೂಪುಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಸಾರ್ವಜನಿಕರು ಹಾಗೂ ಗೋ-ಭಕ್ತರ ಸಹಕಾರದಿಂದ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬೃಹತ್ ಯೋಜನೆಯನ್ನು ಕೈಗೊಳ್ಳಲಾಗಿದೆ.

ರಾಜ್ಯದ ಪ್ರತಿಯೊಂದು ಮನೆಮನೆಗಳಿಂದ ಗೋವುಗಳಿಗೆ ಭಕ್ತಿ ಪೂರ್ವಕವಾಗಿ ಮೇವು ಹಾಗೂ ಗೋ-ಆಹಾರವನ್ನು “ಹೊರೆಕಾಣಿಕೆ – ಹಸಿರು ವಾಣಿ” ಮಾದರಿಯಲ್ಲಿ ಪ್ರತಿದಿನ ಸಲ್ಲಿಸುವ ಮೂಲಕ ನಿರಂತರ ಗೋ-ಸೇವಾ ಅಭಿಯಾನವನ್ನು ಆರಂಭಿಸುವ ಗುರಿ ಹೊಂದಲಾಗಿದೆ.

ಗೋ-ಭಕ್ತರ ಕುಟುಂಬಸ್ಥರ ಮಕ್ಕಳಿಗೆ ದೇಸಿ ಗೋವಿನ ಹಾಲಿನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಹಿಂದು ಸಮಾಜದ ಪ್ರತಿಯೊಂದು ಕುಟುಂಬ, ಕ್ಷೇತ್ರ, ಮಠ, ಮಂದಿರ, ದೈವಸ್ಥಾನ ಹಾಗೂ ಧಾರ್ಮಿಕ ಉತ್ಸವಗಳಿಗೆ ಅಗತ್ಯವಿರುವ ಗೋಮೂತ್ರ, ಪಂಚಗವ್ಯ, ಗೋಮಯ ಪೂಜಾ ಸಾಮಗ್ರಿಗಳು ಕಾಸರಗೋಡು ಗೋ-ಕುಟೀರದಲ್ಲಿ ದಿನನಿತ್ಯ ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು.

2025ರ ದೀಪಾವಳಿ ಹಬ್ಬದ ಗೋ-ಪೂಜೆ ದಿನದಂದು ಗೋ-ಸಂಭ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಗೋ-ಸಂಕಲ್ಪ ಕೈಗೊಳ್ಳಲಾಯಿತು. ಗೋ-ಕುಟೀರದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಗೋ-ಗ್ರಾಸ ನೀಡಲು ಬಯಸುವ ಗೋ-ಸೇವಾ ಭಕ್ತರ ಕುಟುಂಬಸ್ಥರಿಗೆ ಗೌರವಪೂರ್ವಕ ಆಹ್ವಾನ ನೀಡಲಾಗಿದೆ.

ಈ ದಿನದಿಂದಲೇ ಸಮುದಾಯದ ಎಲ್ಲ ವರ್ಗದವರು ಸಕ್ರಿಯವಾಗಿ ಭಾಗವಹಿಸಿ, ಪ್ರತಿಯೊಂದು ಕುಟುಂಬವೂ ಗೋಮಾತೆಯ ಸೇವೆಯನ್ನು ಭಕ್ತಿ-ಶ್ರದ್ಧೆಯಿಂದ ನೆರವೇರಿಸುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕುಟುಂಬವೂ ಒಂದು ದಿನ ಗೋಮಾತೆಯ ಸೇವೆ ಸಲ್ಲಿಸಿ ಅನುಗ್ರಹ ಪಡೆಯಲು ಹಾಗೂ ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನಿಮಿತ್ತ ಗೋ-ಕ್ಷೇತ್ರ ಗೋ-ಕುಟೀರಕ್ಕೆ ಆಗಮಿಸಿ ಸಂಭ್ರಮವನ್ನು ಹಂಚಿಕೊಳ್ಳುವ ಉದ್ದೇಶವನ್ನೂ ಹೊಂದಲಾಗಿದೆ.

ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಗೋ-ಗ್ರಾಸ ನೀಡಿ, ಗೋ-ಆರತಿ ಬೆಳಗಿಸಿ, ಗೋ-ಸಂಕೀರ್ತನೆ ಹಾಡಿ ಗೋ-ಕುಟೀರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಕಾಮಧೇನು ಸ್ವರೂಪದ ಗೋವಿಗೆ ಗೋಮಾತೆ ಎಂಬ ವಿಶೇಷ ಸ್ಥಾನ ನೀಡಿ ಪೂಜಿಸಲಾಗುತ್ತಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೂ ಒತ್ತು ನೀಡಲಾಗುವುದು.

ಗೋ-ಕುಟೀರ ನಿರ್ಮಾಣಕ್ಕೆ ಸಹಕಾರ ನೀಡಿದ ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಗೋ-ಸೇವಾ ದಾನಿಗಳ ಕುಟುಂಬಗಳ ಒಳಿತಿಗಾಗಿ ಗೋ-ಗ್ರಾಸ, ಗೋ-ಆಹಾರ ಅರ್ಪಿಸಿ ಗೋ-ಸಂಕೀರ್ತನೆ ಹಾಗೂ ಗೋ-ಆರತಿಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!