ಬಾಕುಡ ಸಮುದಾಯ ಕುರಿತು ತಪ್ಪು ಮಾಹಿತಿ ಹರಡಿದ ಆರೋಪ: ನವೀನ್ ಸೂರಿಂಜೆ ವಿರುದ್ಧ ಖಂಡನೆ:ಬಾಲಕೃಷ್ಣ ವಿ.ಎನ್.(ಬಾಕುಡ ಪ್ರತಿನಿಧಿ)

ಕಾಸರಗೋಡು: ಬಾಕುಡ ಸಮುದಾಯದ ದೈವದಪಾತ್ರಿ–ಕಾರ್ನವರ ಒಕ್ಕೂಟದ ಇತ್ತೀಚಿನ ವಾರ್ಷಿಕ ಸಭೆಯಲ್ಲಿ ಮುಖ್ಯ ಧಾರ್ಮಿಕ ಭಾಷಣಗಾರರಾಗಿ ಭಾಗವಹಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಹಂಚಿಕೊಂಡ ಭಾಷಣದ ಕೆಲವು ಭಾಗಗಳು ವಿವಾದಕ್ಕೆ ಕಾರಣವಾಗಿವೆ.

ಕರಾವಳಿಯ ನಾಗಬನಗಳ ಮೇಲಿನ ಅಧಿಕಾರ ಬಾಕುಡರಿಗೆ ಮಾತ್ರ ಇದ್ದು, ಕೋಟಿಗಟ್ಟಲೆ ಆದಾಯದ ವ್ಯವಹಾರವನ್ನು ಬ್ರಾಹ್ಮಣರು ಕಸಿದುಕೊಂಡಿದ್ದಾರೆ, ಬಾಕುಡರ ಹಕ್ಕಿನ ನಾಗಾರಾಧನೆಯಿಂದ ಅವರನ್ನು ಹೊರಹಾಕಲಾಗಿದೆ, ಬಾಕುಡರ ಜಮೀನನ್ನು ಬ್ರಾಹ್ಮಣರು ಕಬಳಿಸಿದ್ದಾರೆ ಎಂಬ ರೀತಿಯ ಅಕ್ಷರಶಃ ಸುಳ್ಳು ಮಾಹಿತಿಯನ್ನು ಅವರು ಹರಡಿದ್ದಾರೆ ಎಂದು ಬಾಕುಡ ಸಮುದಾಯದ ಪ್ರತಿನಿಧಿಗಳು ಆರೋಪಿಸಿದ್ದಾರೆ. ಇದರಿಂದ ಬ್ರಾಹ್ಮಣರ ವಿರುದ್ಧ ಬಾಕುಡರನ್ನು ಎತ್ತಿಕಟ್ಟಿ ಸಮಾಜದಲ್ಲಿ ಜಾತಿ ಆಧಾರಿತ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಾಕುಡರ ಇತಿಹಾಸ ತಿಳಿಯಬೇಕಾದರೆ ಇಂದಿರಾ ಹೆಗ್ಡೆ, ಕೈಯ್ಯರ ಕಿಞ್ಞಣ್ಣ ರೈ, ಪುಣಿಚಿತ್ತಾಯ, ಲಕ್ಷಿ ಜಿ. ಪ್ರಸಾದ್ ,ಸುರೇಶ್ ಮಂಗಲ್ಪಾಡಿ ಮೊದಲಾದವರು ನಡೆಸಿರುವ ಸಂಶೋಧನಾ ಕೃತಿಗಳು ಲಭ್ಯವಿದ್ದು, ಅಥವಾ ಬಾಕುಡ ಸಮುದಾಯದ ಪ್ರತಿನಿಧಿಗಳೊಂದಿಗೆ ನೇರ ಚರ್ಚೆ ನಡೆಸಬಹುದಾಗಿತ್ತು. ಆದರೆ ವೇದಿಕೆ ಸಿಕ್ಕಿತೆಂದು ನಿರಾಧಾರ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಬಾಕುಡ ಪ್ರತಿನಿಧಿಗಳು ತಿಳಿಸಿದ್ದಾರೆ.

ಇತಿಹಾಸದ ಪ್ರಕಾರ ಬಾಕುಡ ಸಮುದಾಯದ ಮೂಲ ನೆಲೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಭಾಗವಾಗಿದ್ದು, ಉದ್ಯೋಗದ ನಿಮಿತ್ತ ಮಂಗಳೂರು, ಪುತ್ತೂರು, ಉಡುಪಿ ಹಾಗೂ ಕೇರಳದ ವಯನಾಡು ಪ್ರದೇಶಗಳಿಗೆ ವಲಸೆ ಬಂದವರಾಗಿದ್ದಾರೆ. ಕರಾವಳಿಯುದ್ದಕ್ಕೂ ಇರುವ ಎಲ್ಲಾ ನಾಗಬನಗಳ ಮೇಲೆ ಬಾಕುಡರಿಗೆ ಹಕ್ಕಿಲ್ಲ. ಬಾಕುಡ ಸಮುದಾಯಕ್ಕೆ ಸೇರಿದ ೨೮ ನಾಗಬನಗಳಲ್ಲಿ ಮಾತ್ರ ಹಾಲೆರೆಯುವ ಹಕ್ಕು ಬಾಕುಡರಿಗಿದ್ದು, ಇತರ ನಾಗಬನಗಳಲ್ಲಿ ಪೂಜೆ ನಡೆಸುವುದು ನಮ್ಮ ಹಕ್ಕಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾಗಾರಾಧನೆಯಲ್ಲಿ ದೈವದಪಾತ್ರಿ ಹಾಗೂ ಕಾರ್ನವರಿಗಿರುವ ಉದ್ಯೋಗವಲ್ಲ, ಬದಲಾಗಿ ಪ್ರತಿ ಕುಟುಂಬಕ್ಕೆ ಸಂಬಂಧಿಸಿದ ಸೇವೆಯಾಗಿದೆ. ಬಾಕುಡರು ಅರಸೊತ್ತಿಗೆ ಸಂಬಂಧ ಹೊಂದಿದವರು, ಈ ಮಣ್ಣಿನ ಹಕ್ಕುದಾರರು, ನಾಗಾರಾಧನೆಯಲ್ಲಿ ಮುಂಚೂಣಿಯಲ್ಲಿದ್ದವರು, ಭೂಮಿಪುತ್ರರು, ಕೃಷಿ ಹಾಗೂ ಚಾಪೆ ಹನಿಯುವ ಕಲೆಗಳಲ್ಲಿ ನಿಪುಣರು, ಬಂಗಾರದ ಜನಿವಾರ ಧರಿಸುವ ಸಂಪ್ರದಾಯ ಹೊಂದಿದ ಸಮುದಾಯ ಎಂದು ವಿವರಿಸಲಾಗಿದೆ.

ಇಂತಹ ಚಾರಿತ್ರಿಕ ಹಿನ್ನೆಲೆ ಇರುವ ಬಾಕುಡ ಸಮುದಾಯ ಎಲ್ಲಿಯೂ ಬ್ರಾಹ್ಮಣರು ಅಥವಾ ಮುಂಡಾಸುಧಾರಿಗಳು ನಮ್ಮ ಆರಾಧನೆ ಅಥವಾ ಜಮೀನನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿಕೊಂಡಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಸುಳ್ಳು ಮಾಹಿತಿಯನ್ನು ಹರಡಿ ಬಾಕುಡರನ್ನು ಬ್ರಾಹ್ಮಣರ ವಿರುದ್ಧ ಎತ್ತಿಕಟ್ಟಿರುವುದು ಖಂಡನೀಯ ಎಂದು ಬಾಕುಡ ಪ್ರತಿನಿಧಿಯಾಗಿ ನಾನು ಹೇಳಲು ಇಚ್ಛಿಸುತ್ತೇನೆ ಎಂದು ಬಾಲಕೃಷ್ಣ ವಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!