ಮಂಜೇಶ್ವರ: ವಾಹನ ತಪಾಸಣೆ ವೇಳೆ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನಲ್ಲಿ 12.640 ಕೆ.ಜಿ ಗಾಂಜಾವನ್ನು ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರುದಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಪ್ರಯಾಣಿಕನಾಗಿದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಪ್ರಕಾಶ್ ಡೋಂಗ್ರಾ (37) ಎಂಬಾತನ ಬಳಿಯಿಂದ ಗಾಂಜಾ ಪತ್ತೆಯಾಗಿದೆ.
13 ಪ್ಯಾಕೆಟ್‌ಗಳಲ್ಲಿ ಟ್ರಾಲಿ ಬ್ಯಾಗ್‌ನಲ್ಲಿ ಸಾಗಿಸಲಾಗುತ್ತಿದ್ದ ಗಾಂಜಾವನ್ನು ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಕೆ. ಶಿಜಿಲ್ ಕುಮಾರ್ ಹಾಗೂ ಅವರ ತಂಡ ಪ್ರಕರಣ ದಾಖಲಿಸಿಕೊಂಡಿದೆ.
ತಪಾಸಣೆ ಕಾರ್ಯಾಚರಣೆಯಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ ಆದರ್ಶ್ ಜಿ, ಸಹಾಯಕ ಎಕ್ಸೈಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸನ್ ಪತ್ತಿಲ್, ಪ್ರಮೋದ್ ಕುಮಾರ್ ಹಾಗೂ ಪ್ರಿವೆಂಟಿವ್ ಅಧಿಕಾರಿ ಪ್ರಜಿತ್ ಕುಮಾರ್, ಮಧು ಸೇರಿದಂತೆ ಇತರರು ಭಾಗವಹಿಸಿದ್ದರು. ಪ್ರಕರಣದ ಬಗ್ಗೆ ಮುಂದಿನ ತನಿಖೆ ಮುಂದುವರಿದಿದೆ.