ಕಾಸರಗೋಡು: ಪುಸ್ತಕ ಜ್ಞಾನವು ವ್ಯಕ್ತಿಯ ವಿಕಾಸಕ್ಕೆ ಪೂರಕವಾಗಿದ್ದು, ಯಶಸ್ವಿ ಜೀವನದ ಹಾದಿಯನ್ನು ತೋರಿಸುತ್ತದೆ ಎಂದು ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಹೇಳಿದರು.
ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ವಾಚನ ವಾರಾಚರಣೆ ಅಂಗವಾಗಿ ನಗರದ ಭಾಲಭವನ್ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವಿದ್ಯಾರ್ಥಿಗಳಿಗೆ ಪುಸ್ತಕಗಳೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಓದಿನಿಂದ ಮನಸ್ಸಿಗೆ ಸಂತೋಷ, ಸಮಾಧಾನ ಹಾಗೂ ವಿಷಯಗಳ ಅರಿವು ಮೂಡುತ್ತದೆ. ಲೋಕಾನುಭವವನ್ನು ಹೆಚ್ಚಿಸುವ ಓದುವ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ಭಾಲಭವನ್ ವಿದ್ಯಾ ಸಂಸ್ಥೆಯ ಎಜುಕೇಷನಲ್ ಅಡ್ವೈಸರ್ ಹಾಗೂ ಕನ್ನಡ ಭವನದ ನಿರ್ದೇಶಕ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಿದರು. ಕನ್ನಡ ಭವನವು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉದ್ದೀಪನಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಕನ್ನಡ ಭವನದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಭಜನಾ ಗುರು ಹಾಗೂ ಕಲಾವಿದ ಜಯಾನಂದ ಕುಮಾರ್ ಹೊಸದುರ್ಗ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪತ್ರಕರ್ತ ಜಗನ್ನಾಥ್ ಶೆಟ್ಟಿ ವರದಿ ತಯಾರಿಕೆ ಕುರಿತು ವಿಶೇಷ ತರಗತಿ ನಡೆಸಿದರು.
ಈ ಸಂದರ್ಭದಲ್ಲಿ ಭಾಲಭವನ್ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯಿನಿ ಲೀಲಾವತಿ ನಾಯರ್ ಹಾಗೂ ಅಧ್ಯಾಪಕಿ ದೀಪ್ತಿ ಅವರನ್ನು ಶಾಲು ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ಅಲ್ಲದೆ ಶಾಲಾ ಗ್ರಂಥಾಲಯಕ್ಕೆ ₹1,000 ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅನಿಸಿಕೆ, ಗಾಯನ, ಪಿ.ಎನ್. ಪಣಿಕ್ಕರ್ ಕುರಿತು ಭಾಷಣ, ವಾಚನ ವಾರಾಚರಣೆ ಕುರಿತು ಚರ್ಚೆ ಹಾಗೂ ಸಂವಾದ ನಡೆಯಿತು.
ಗ್ರಂಥಾಲಯ ಸಂಚಾಲಕಿ ಸಂಧ್ಯಾರಾಣಿ ಸ್ವಾಗತಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೆ.ಸಿ.ಎನ್. ವಂದಿಸಿದರು.