ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಿ. ಕಾಲದ ಓಗಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು.ಕಾವ್ಯದ ಮಾತು ಧ್ವನಿ ಯಾಗಬೇಕು. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಯನ್ನು ಅನುಸರಿಸಿದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ರಂಗಮಂಡಲ ಹಾಗೂ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಸಮಿತಿ ಆಶ್ರಯದಲ್ಲಿ ನಡೆದ ಕಾವ್ಯ ಸಂಸ್ಕೃತಿ ಯಾನ ಜನರೆಡೆಗೆ ಕಾವ್ಯ ಹನ್ನೊಂದನೆಯ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಮಾತನಾಡಿದರು.
ಕಣ್ಣೂರು ಪ್ರಾಧ್ಯಾಪಕಿ ಹಾಗೂ ಕವಯಿತ್ರಿ ಡಾ.ಕೆ.ವಿ.ಸಿಂಧು ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಎಡಿಎಂ ಅಖಿಲ್ ಪಿ., ಮಾಜಿ ಶಾಸಕರು ಹಾಗೂ ಸಾಹಿತಿ ಕೆ.ವಿ.ಕುಂಞ ರಾಮನ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಪ್ರಾಂಶುಪಾಲ ಡಾ.ಮೊಹಮ್ಮದಾಲಿ ಪೆರ್ಲ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಿಳಿವಿಂಡು ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್, ಕಲಾವಿದೆ ನಿರ್ಮಲಾ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದರು.