ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ವೈಭವದ ಆಚರಣೆ .ಬಾಕುಡ ಸಮುದಾಯದ ನಾಗಬನಗಳಲ್ಲಿ ಬಾಕುಡರಿಂದಲೇ ತನು ಸಮರ್ಪಣೆ .

ಮಂಜೇಶ್ವರ : ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಮೊದಲ ಹಬ್ಬ ನಾಗರಪಂಚಮಿಯನ್ನು ವೈಭವದಿಂದ ನಾಡಿನೆಲ್ಲೆಡೆ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ವಿವಿಧ ನಾಗ ಕ್ಷೇತ್ರಗಳಿಗೆ , ನಾಗಬನಗಳಿಗೆ, ತರವಾಡು , ದೇವಸ್ಥಾನ ಹಾಗೂ ದೈವಸ್ಥಾನಗಳಿಗೆ ತೆರಳಿ ನಾಗನಿಗೆ ತನು ಸಮರ್ಪಣೆ ಮಾಡಿ ಸಂಪನ್ನರಾದರು.

ಸಪ್ತ ಭಾಷಾ ಸಂಗಮ ಭೂಮಿಯಾದ ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶದಲ್ಲಿ ಬರುವ ಬಾಕುಡ ಸಮುದಾಯದ ಇತಿಹಾಸ ಪ್ರಸಿದ್ಧ ನಾಗ ಬನಗಳಲ್ಲಿ ಬೆಳಗ್ಗಿನಿಂದಲೇ ವೈಭವದ ನಾಗರ ಪಂಚಮಿಯನ್ನು ಆಚರಿಸಲಾಯಿತು. ಆದರೆ ಈ ಬಾಕುಡ ಸಮುದಾಯ ನಾಗ ಬನಗಳಲ್ಲಿ ಎಲ್ಲಾ ರೀತಿಯ ತನು ಸಮರ್ಪಣೆ ಹಾಗೂ ಪೂಜೆ ವಿಧಿವಿಧಾನವನ್ನು ಬಾಕುಡ ಸಮುದಾಯದವರೇ ಮಾಡುವುದು ವಿಶೇಷತೆಯಾಗಿದೆ.

ಅಂದರೆ ಈ ಸಮುದಾಯದ ಪವಿತ್ರ ಹದಿನೆಂಟು ದೈವಸ್ಥಾನದ ದೈವದ ಪಾತ್ರಿಗಳು ಮತ್ತು ಕಾರ್ನವರು ಆಯಾ ಆಯಾ ನಾಗ ಬನದಲ್ಲಿ ತನು ಸಮರ್ಪಣೆ ಮಾಡಿ ಭಕ್ತರನ್ನು ಹರಸುತ್ತಾರೆ. ಬಾಕುಡರ ನಾಗಬನಗಳಲ್ಲಿ ಯಾವುದೇ ಪುರೋಹಿತ ವರ್ಗದವರ ಉಪಸ್ಥಿತಿ ಇಲ್ಲದೆ ಬಾಕುಡರ ದೈವದ ಪಾತ್ರಿಗಳೇ ಇಲ್ಲಿ ಪೌರೋಹಿತ್ಯ ನಡೆಸುವರು . ಇದು ಅನಾದಿಕಾಲದ ಆಚಾರ ಮತ್ತು ಸಂಸ್ಕೃತಿಯಾಗಿದೆ.


ಆಯಾ ಆಯಾ ತರವಾಡಿಗೆ ಸಂಭಂದ ಪಟ್ಟ ಕುಟುಂಬಸ್ಥರು ಕುಟುಂಬ ಸಮೇತರಾಗಿ ಅಂದು ನಾಗ ಬನದಲ್ಲಿ ಹಾಜರಿರುತ್ತಾರೆ. ಇದು ಮಾನವೀಯ ಸಂಬಂಧದ ಬೆಳವಣಿಗೆ ಮತ್ತು ವಿಸ್ತಾರಕ್ಕೆ ಪೂರಕವಾಗಿದೆ .ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ವಿಶಿಷ್ಟವಾದ ಆಚರಣೆ ಮಕ್ಕಳು ಸಹಿತ ಎಲ್ಲರು ಸಾಮೂಹಿಕವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸರಕಾರ ಈ ದಿನವನ್ನು ರಜಾ ದಿನವನ್ನಾಗಿ ಘೋಷಿಸಬೇಕೆಂದು ಸಾರ್ವಜನಿಕರ ಸಾರ್ವತ್ರಿಕ ಅಭಿಪ್ರಾಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!