ಕುಂಬಡಾಜೆ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಉಪಟಳ: ಕೃಷಿಕರು ಆತಂಕದಲ್ಲಿ

ಬೆಳಿಂಜ, ಅಲಿಂಜ, ಪೊಸೊಳಿಗೆ ಪ್ರದೇಶಗಳಲ್ಲಿ ಕೃಷಿಗೆ ವ್ಯಾಪಕ ಹಾನಿ – 50ಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳು ನಾಶ

ಕುಂಬಡಾಜೆ: ಕುಂಬಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳಿಂಜ, ಅಲಿಂಜ ಹಾಗೂ ಪೊಸೊಳಿಗೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಾಗಿದ್ದು, ಕೃಷಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸ್ಥಳೀಯ ಅನೇಕ ಕೃಷಿಕರು ಅಡಿಕೆ, ತೆಂಗು ಹಾಗೂ ಭತ್ತದ ಕೃಷಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ರಾತ್ರಿ ಸಮಯದಲ್ಲಿ ಹಿಂಡು ಹಿಂಡಾಗಿ ಕೃಷಿ ಪ್ರದೇಶಗಳಿಗೆ ನುಗ್ಗುತ್ತಿರುವ ಕಾಡುಹಂದಿಗಳು ಅಡಿಕೆ ತೋಟ ಹಾಗೂ ಗದ್ದೆಗಳಿಗೆ ದಾಳಿ ನಡೆಸಿ ಅಪಾರ ಹಾನಿ ಉಂಟುಮಾಡುತ್ತಿವೆ.

ಕಾಡುಹಂದಿಗಳ ದಾಳಿಯಿಂದ ಅಡಿಕೆ ಗಿಡಗಳು, ಬಾಳೆ ಗಿಡಗಳು ಹಾಗೂ ತೆಂಗಿನ ಸಸಿಗಳು ಬುಡಸಮೇತ ನಾಶವಾಗಿವೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಅಡಿಕೆ ಮತ್ತು ಬಾಳೆ ಗಿಡಗಳು ಹಾನಿಗೊಳಗಾಗಿವೆ ಎಂದು ಸ್ಥಳೀಯ ಕೃಷಿಕರು ತಿಳಿಸಿದ್ದಾರೆ.

ಇದಲ್ಲದೆ, ಈ ಭಾಗದಲ್ಲಿ ಹಿಂದೆ ನಡೆದ ಕಾಡುಹಂದಿ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿರುವುದರಿಂದ ಕೃಷಿಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಕೃಷಿ ಬೆಳೆಗಳು ಕ್ಷಣಾರ್ಧದಲ್ಲಿ ನಾಶವಾಗುತ್ತಿರುವುದರಿಂದ ಅಡಿಕೆ, ಬಾಳೆ ಹಾಗೂ ತೆಂಗು ಕೃಷಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿದುಬಂದಿದೆ.

ಕಾಡುಹಂದಿಗಳ ನಿರಂತರ ದಾಳಿಯಿಂದ ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಬೆಳೆಗಳ ರಕ್ಷಣೆ ಹಾಗೂ ಸಾರ್ವಜನಿಕರ ಜೀವಭದ್ರತೆಯ ದೃಷ್ಟಿಯಿಂದ ಕುಂಬಡಾಜೆ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!