ನಾಳೆಯಿಂದ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಐದು ದಿನಗಳ ಕಳಿಯಾಟ ಮಹೋತ್ಸವ

ಕಾಸರಗೋಡು: ಬೇಕಲ್‌ಫೋರ್ಟ್ ಸಮೀಪದ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಕಳಿಯಾಟ ಮಹೋತ್ಸವವು ನಾಳೆ (ನ.27)ರಿಂದ ಡಿ.1ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ, ದೈವಾರಾಧನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಒಂದು ದಿನದ ಹರಕೆ ಕಳಿಯಾಟ ಸೇರಿದಂತೆ ಐದು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ವಿವಿಧ ದೈವಗಳ ಆರಾಧನೆ, ಕೋಲ, ವೆಳ್ಳಾಟ, ಕುಳಿಚ್ಚಾಟ, ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

ನ.27ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ವ್ಯಾಪ್ತಿಯ ಏಳು ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಬಾರಿಕ್ಕಾಟಪ್ಪನ್ ಶ್ರೀ ಮಹಿಷಮರ್ಧಿನಿ ಕ್ಷೇತ್ರದಿಂದ ದೀಪ ಹಾಗೂ ಬತ್ತಿ ತರುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8 ಗಂಟೆಗೆ ಮಾತೃ ಸಮಿತಿಯಿಂದ ಕೈಕೊಟ್ಟಿಕಳಿ ನಡೆಯಲಿದ್ದು, ರಾತ್ರಿ 9 ಗಂಟೆಯಿಂದ ಪೂಮಾರುತನ್ ದೈವದ ವೆಳ್ಳಾಟ ಹಾಗೂ ವಿಷ್ಣುಮೂರ್ತಿ, ರಕ್ತಚಾಮುಂಡಿ ಮತ್ತು ಭಗವತಿ ದೈವಗಳ ಕುಳಿಚ್ಚಾಟ ಜರುಗಲಿದೆ.

ನ.28ರಂದು ಬೆಳಗ್ಗಿನಿಂದ ವಿವಿಧ ದೈವಗಳ ಕೋಲ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಡಿಯನ್ ಕಾನತ್ತಿಂಗಲ್ ಶ್ರೀ ವಯನಾಟು ಕುಲಪನ್ ದೈವಸ್ಥಾನದಿಂದ ಉಲ್ಪೆ ಮೆರವಣಿಗೆ ಆರಂಭವಾಗಲಿದೆ. ತಾಲಪ್ಪೋಲಿ, ಮುತ್ತುಕೊಡೆ, ಸಿಂಗಾರಿ ಮೇಳ, ಪೂಕಾವಡಿ, ಕಾವಡಿಯಾಟ, ವಾದ್ಯಮೇಳ ಹಾಗೂ ವಿವಿಧ ಕಲಾಪ್ರದರ್ಶನಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.

ನ.29ರಂದು ದೈವಾರಾಧನೆಯೊಂದಿಗೆ ರಾತ್ರಿ 8 ಗಂಟೆಗೆ ಜಾನಪದ ಗೀತೆಯ ವೇದಿಕೆ ಕಾರ್ಯಕ್ರಮ ನಡೆಯಲಿದೆ. ನ.30ರಂದು ಸಂಜೆ 7 ಗಂಟೆಗೆ ಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಕಲಾ-ಕ್ರೀಡಾ ಕ್ಷೇತ್ರದ ಸಾಧಕರಿಗೆ ಬಹುಮಾನ ವಿತರಣೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸ್ಥಳೀಯ ಕಲಾಪ್ರತಿಭೆಗಳಿಂದ ಕಲಾಸಂಧ್ಯಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ.1ರಂದು ಉತ್ಸವದ ಸಮಾರೋಪದ ಅಂಗವಾಗಿ ವಿವಿಧ ದೈವಗಳ ಆರಾಧನೆ ನಡೆಯಲಿದೆ. ಸಂಜೆ 4 ಗಂಟೆಗೆ ವಿಷ್ಣುಮೂರ್ತಿ ದೈವದ ಪ್ರದಕ್ಷಿಣೆ ಬಾರಿಕ್ಕಾಡಪ್ಪ ಶ್ರೀ ಮಹಿಷಮರ್ಧಿನಿ ಕ್ಷೇತ್ರ ಹಾಗೂ ನಾಯಕರ ಹಿತ್ತಿಲು ಶ್ರೀ ಮಲ್ಲಿಕಾರ್ಜುನ ಕ್ಷೇತ್ರಗಳಿಗೆ ತೆರಳಲಿದೆ. ಬಳಿಕ ತೆಂಗಿನಕಾಯಿ ಒಡೆಯುವ ಸೇವೆ ನಡೆಯಲಿದ್ದು, ರಾತ್ರಿ ವಿಷ್ಣುಮೂರ್ತಿ ತಿರುಮುಡಿ ಇಳಿಯುವುದರೊಂದಿಗೆ ಐದು ದಿನಗಳ ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳಲಿದೆ.

ಉತ್ಸವದ ಎಲ್ಲ ಧಾರ್ಮಿಕ, ದೈವಾರಾಧನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ-ದೇವರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ಮನವಿ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!