ಮಂಜೇಶ್ವರ : ತಲಪಾಡಿ ಕೆ.ಸಿ.ರೋಡು ಸಮೀಪದ ಅಜ್ಜಿನಡ್ಕ ಸಾಮಾನಿಗೆ ಕುಟುಂಬಕ್ಕೆ ದುರಂತಗಳ ಸರಮಾಲೆಯೇ ಇದೆ. ಒಟ್ಟು ನಾಲ್ಕು ಅಪಘಾತಗಳನ್ನಾಗಿ ಈ ಕುಟುಂಬಕ್ಕೆ ಸಂಬಂಧಪಟ್ಟ 12 ಮಂದಿ ಸಾವನ್ನಪ್ಪಿದ್ದಾರೆ.
ಗುರುವಾರದಂದು ತಲಪಾಡಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತಾರುಣ ಸಾವಿಗೀಡಾದ ಆರು ಮಂದಿ ಪೈಕಿ ಐದು ಮಂದಿ ಇದೇ ಕುಟುಂಬಕ್ಕೆ ಸೇರಿದವರು. ಒಂದರ ಹಿಂದೆ ಒಂದರಂತೆ ರಸ್ತೆ ಅಪಘಾತಕ್ಕೀಡಾಗಿ ಈ ಕುಟುಂಬದ ಸದಸ್ಯರು ಸಾವಿಗೀಡಾಗುವುದು ನಿಜಕ್ಕೂ ದಾರುಣ ಸಂಗತಿ.
2018 ಜುಲೈ 9 ರಂದು ಮುಂಜಾನೆ ಉಪ್ಪಳ ಸಮೀಪದ ನಯಾಬಜಾರ್ ಬಳಿ ಅಜ್ಜಿನಡ್ಕ ಕುಟುಂಬ ಸಂಚರಿಸುತ್ತಿದ್ದ ತೂಫಾನ್ ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದರು. ಅಜ್ಜಿನಡ್ಕದ ಸಾಮಾನಿಗೆ ಮನೆಯ ದಿ.ಮೊಯ್ದೀನ್ ಕುಂಞ ಯವರ ಪತ್ನಿ ಬೀಫಾತಿಮ್ಮ (72), ಪುತ್ರಿ ನಸೀಮಾ (38), ಅಳಿಯ ಮುಸ್ತಾಕ್ (41), ಮೊಮ್ಮಗಳಾದ ಅಸ್ಮಾ(30), ಪತಿ ಇಮ್ತಿಯಾಝ್(35) ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಪಾಲಕ್ಕಾಡಿನಲ್ಲಿ ಗೃಹಪ್ರವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮನೆಗೆ ತಲುಪುವ ಮಾರು ದೂರದಲ್ಲಿಯೇ ಈ ಭೀಕರ ಅಪಘಾತ ಅಂದು ನಡೆದಿತ್ತು. ಈ ದುರಂತ ನಡೆದು ಏಳು ವರ್ಷಗಳ ಬಳಿಕ ಅದೇ ಕುಟುಂಬ ಇನ್ನೊಂದು ದುರಂತಕ್ಕೀಡಾಗಿದೆ. ಗುರುವಾರದಂದು ತಲಪಾಡಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐದು ಮಂದಿಯು ಇದೇ ಕುಟುಂಬದವರು.
2018ರ ಜುಲೈಯಲ್ಲಿ ಉಪ್ಪಳ ಅಪಘಾತದಲ್ಲಿ ಮೃತಪಟ್ಟ ಬೀಫಾತಿಮಾರವರ ಮಕ್ಕಳಾದ ಖದೀಜಾ (60), ನಫೀಸಾ (52), ಮೊಮ್ಮಕ್ಕಳಾದ ಆಯಿಷಾ ಫಿದಾ(19), ಹಸ್ನಾ ಫಾತಿಮಾ (11), ನಪೀಸಾಳ ಅತ್ತೆ ಅವ್ವಮ್ಮ (72) ಗುರುವಾರ ತಲಪಾಡಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಈ ಕುಟುಂಬದ ಇನ್ನಿಬ್ಬರು ಮೃತಪಟ್ಟಿದ್ದು ರಸ್ತೆ ಅಪಘಾತದಲ್ಲಿ ಎಂಬುದು ಮತ್ತೊಂದು ದಾರುಣ ಸಂಗತಿ. ಗುರುವಾರ ಮೃತಪಟ್ಟ ನಫೀಸಾಳ ಪತಿ ರಫೀಕ್ 10 ವರ್ಷಗಳ ಹಿಂದೆ ಉಚ್ಚಿಲದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ರಫೀಕ್ ಚಲಾಯಿಸುತ್ತಿದ್ದ ಆಟೋರಿಕ್ಷಾ ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಬೀಫಾತಿಮಾರ ಕಿರಿಯ ಪುತ್ರಿ ರೆಹನಾಳ ಪತಿ ಅಶ್ರಫ್ 2014ರಲ್ಲಿ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ನಾಲ್ಕು ಅಪಘಾತಗಳಲ್ಲಾಗಿ ಒಟ್ಟು 12 ಜೀವಗಳನ್ನು ಕಳೆದುಕೊಂಡ ಕೆ.ಸಿ. ರೋಡು ಅಜ್ಜಿನಡ್ಕದ ಸಾಮಾನಿಗೆ ಮನೆ ದುರಂತಗಳ ಸರಮಾಲೆಯಿಂದ ತತ್ತರಿಸಿ ಹೋಗಿದೆ.