ಹಿಪ್ನೋಟಿಸಂ ಹೆಸರಲ್ಲಿ ಕಿರಿಯ ವಿದ್ಯಾರ್ಥಿಳನ್ನು ಹಿಗ್ಗಾಮುಗ್ಗಾ ಥಳಿಸಿ ಪ್ರಜ್ಞೆ ತಪ್ಪಿಸಿದ ಹಿರಿಯ ವಿದ್ಯಾರ್ಥಿಗಳು : ನೂತನ ಶೈಲಿಯ ರಾಗಿಂಗ್

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳು ನೂತನ ರೀತಿಯ ರಾಗಿಂಗ್ ಕಂಡು ಹಿಡಿದಿದ್ದು,
ಹಿಪ್ನೋಟಿಸಂ ಹೆಸರಲ್ಲಿ ಹೊಸ ರಾಗಿಂಗ್ ಇದೀಗ ಭಾರೀ ಸುದ್ದಿಯಾಗುತ್ತಿದೆ. ಹಿಪ್ನೋಟಿಸಂ ತೋರಿಸಿ ಕೊಡುವುದಾಗಿ ಹೇಳಿ ಕೆಲವೊಂದು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಗಂಭೀರ ಹಲ್ಲೆಗೈದು ಅವರ ಪ್ರಜ್ಞೆ ತಪ್ಪಿಸಿರುವುದು ಆತಂಕಕ್ಕೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗುತಿದ್ದಂತೆಯೇ ಸಂಬಂಧಪಟ್ಟ ಶಾಲಾ ಅಧಿಕಾಕಸ್ಥರನ್ನು ಹಾಗೂ ಘಟನೆಗೆ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಅವರ ಹೆತ್ತವರನ್ನು ಕುಂಬಳೆ ಪೊಲೀಸರು ಠಾಣೆಗೆ ಕರೆಸಿ ತಾಕೀತು ನೀಡಿದ್ದಾರೆ.

ಬಂದ್ಯೋಡ್ ಮುಟ್ಟಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಇತ್ತೀಚೆಗೆ ಹಿಪ್ನೋಟಿಸಂ
ಹೆಸರಲ್ಲಿ ವಿದ್ಯಾರ್ಥಿಗಳಿಗೆ ಹಲ್ಲೆಗೈದ ಘಟನೆ ನಡೆದಿರುವುದಾಗಿ ದೂರಲಾಗಿದೆ. ಪ್ರಸ್ತುತ ಶಾಲೆಯ 8ನೇ ತರಗತಿಗೆ ಆಗಮಿಸಿದ ಮೂರು ಮಂದಿ ಹಿರಿಯ ವಿದ್ಯಾರ್ಥಿಗಳು ಈ ಕೃತ್ಯ ನಡೆಸಿದ್ದಾರೆನ್ನಲಾಗಿದೆ. 7ನೇ ತರಗತಿ ವಿದ್ಯಾರ್ಥಿಯೂ ಮಂಗಲ್ಪಾಡಿ ನಯಾ ಬಜಾರ್ ನಿವಾಸಿಯ ಪುತ್ರನ ಸಹಿತ ಅದೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿಯ ಕುತ್ತಿಗೆಯ ಹಿಂಭಾಗಕ್ಕೆ ಹಿರಿಯ ವಿದ್ಯಾರ್ಥಿಗಳು ಬಲವಾಗಿ ಹೊಡೆದಿದ್ದಾರೆನ್ನಲಾಗಿದೆ.

ಹಲ್ಲೆಗೊಂಡ ವಿದ್ಯಾರ್ಥಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದು ಈ ವೇಳೆ ಆತನ ತಲೆಗೆ ಗಂಭೀರ ಗಾಯ ಉಂಟಾಗಿದೆ. ಪ್ರಜ್ಞೆ ತಪ್ಪಿದ ವಿದ್ಯಾರ್ಥಿಯ ಮುಖಕ್ಕೆ ಮತ್ತೊಮ್ಮೆ ಹೊಡೆದಿದ್ದು ಈ ವೇಳೆ ವಿದ್ಯಾರ್ಥಿಗೆ ಪ್ರಜ್ಞೆ ಮರಳಿದೆ ಎನ್ನಲಾಗಿದೆ. ಈ ವೇಳೆ ಹಲ್ಲೆಗೈದ ವಿದ್ಯಾರ್ಥಿಗಳು ಸಂತೋಷದಿಂದ ಗಟ್ಟಿಯಾಗಿ ನಗುತ್ತಾ ನೃತ್ಯಮಾಡತೊಡಗಿದ್ದಾರೆ. ಇದನ್ನರಿತ ಇತರ ವಿದ್ಯಾರ್ಥಿಗಳು ಭಯ ಹಾಗೂ ಆಶ್ಚರ್ಯದಿಂದ ಇದೇನೆಂದು ಪಶಿಸಿದಾಗ ಇದೊಂದು ಹಿಪ್ನೋಟಿಸಂ ಅಧ್ಯಾಪಕರು ಹೇಳಿಕೊಟ್ಟದ್ದು ಎಂದು ಹೇಳಿ ಅಲ್ಲಿಂದ ಕಾಲ್ಗಿತ್ತಿದ್ದಾರಂತೆ.

ಮುಖ ಹಾಗೂ ತಲೆಗೆ ಗಾಯಗೊಂಡ ವಿದ್ಯಾರ್ಥಿಯನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ವಿದ್ಯಾರ್ಥಿಗಳ ಈ ವರ್ತನೆಯಿಂದ ಮಕ್ಕಳ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕುಂಬಳೆ ಪೊಲೀಸರು ಸಂಬಂಧಪಟ್ಟ ಶಾಲಾ ಅಧಿಕಾರಸ್ಥರನ್ನು, ಹಲ್ಲೆಗೈದ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರನ್ನು ಠಾಣೆಗೆ ಕರೆಸಿ ತಾಕೀತು ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!