ಮಂಜೇಶ್ವರ: ಇಸ್ರೇಯಿಲ್ ನಡೆಸುತ್ತಿರುವ ನರಮೇಧವನ್ನು ತೀವ್ರವಾಗಿ ಖಂಡಿಸಿ ಹಾಗೂ ಅದರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಕುಂಜತೂರಿನಲ್ಲಿ ಸಿಪಿಐಎಂ ನೇತೃತ್ವದಲ್ಲಿ ಸಾಮ್ರಾಜ್ಯಶಾಹಿ ವಿರುದ್ಧ ಬೃಹತ್ ಪ್ರತಿಭಟನೆ, ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು.
ಸಿಪಿಐಎಂ ಮಂಜೇಶ್ವರ ಏರಿಯಾ ಸದಸ್ಯ ಕೆ. ಕಮಲಾಕ್ಷ ಸಭೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಇಸ್ರೇಯಿಲ್ ನಡೆಸುತ್ತಿರುವ ದಾಳಿಗಳು ಮನುಷ್ಯತ್ವದ ವಿರುದ್ಧದ ಕ್ರೂರ ದಾಳಿಗಳಾಗಿವೆ. ಗಾಜಾ ಮತ್ತು ಪ್ಯಾಲಸ್ತೀನಾ ಜನರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕು. ಭಾರತ ಸೇರಿದಂತೆ ಎಲ್ಲ ಪ್ರಗತಿಪರ ರಾಷ್ಟ್ರಗಳು ಈ ಯುದ್ಧದ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು,” ಎಂದು ಕಟುವಾದ ಬಾಷೆಯಲ್ಲಿ ಹೇಳಿದರು .
ಪ್ರತಿಭಟನಾ ಮೆರವಣಿಗೆ ಕುಂಜತೂರಿನ ಪ್ರಮುಖ ಸ್ಥಳಗಳಿಂದ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ನೂರಾರು ಸಿಪಿಐಎಂ ಕಾರ್ಯಕರ್ತರು, ಶಾಂತಿಯುತವಾಗಿ ಘೋಷಣೆ ಕೂಗಿ ಇಸ್ರೇಯಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ನರಮೇಧ ಸಾಮ್ರಾಜ್ಯಶಾಹಿಯ ಒಂದು ರೂಪವಾಗಿದ್ದು, ಅದು ತಕ್ಷಣ ಕೊನೆಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂತು. ಪ್ಯಾಲಸ್ತೀನ್ ಜನರ ಹಕ್ಕುಗಳಿಗೆ ಬೆಂಬಲ ಸೂಚಿಸುವ ಧ್ವನಿಗಳು ಸಭೆಯಲ್ಲಿ ಪ್ರತಿಧ್ವನಿಸಿತು.
ಪ್ರತಿಭಟನೆಗೆ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ ಕನಿಲ, ಬಾಲಕೃಷ್ಣ ಮಾಸ್ಟರ್, ಮುನೀರ್, ಕಬೀರ್, ಶ್ರೀಧರ ಮೊದಲಾದವರು ಮಾತಾಡಿದರು.ಅಶ್ರಫ್ ಕುಂಜತ್ತೂರು ಸ್ಥಾಗತಿಸಿ ಬದ್ರುದ್ದೀನ್ ವಂದಿಸಿದರು.