ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತ್ತಿನ ಕೆಜೆಪದವಿಯಲ್ಲಿ ಭಯಾನಕವಾಗಿ ಉಂಟಾಗುತ್ತಿರುವ ಭೂಮಿ ಬಿರುಕುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ವಿಶೇಷ ತಂಡ ಸ್ಥಳಕ್ಕೆ ಭೇಟಿ ನೀಡಿತು. 2019ರಿಂದ ಆರಂಭವಾದ ಈ ಸಮಸ್ಯೆ, ಕಳೆದ ವರ್ಷ (2024) ಅತ್ಯಂತ ಗಂಭೀರ ಸ್ವರೂಪವನ್ನು ಪಡೆದಿದ್ದು, ಈ ವರ್ಷ ಭೂಭಾಗವು ಹೆಚ್ಚು ತಳಮಟ್ಟಕ್ಕೆ ಇಳಿಯುತ್ತಿದ್ದಂತೆ, ಆ ಪ್ರದೇಶದ ಮೂವರು ಕುಟುಂಬಗಳನ್ನು ತುರ್ತು ಅವಸ್ಥೆಯಲ್ಲಿ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಉಂಟಾಯಿತು.
ಭೂಮಿ ಬಿರುಕುಗಳಿಂದಾಗಿ ಕೃಷಿಭೂಮಿಗಳು ನಾಶವಾಗಿದ್ದು, ಸ್ಥಳೀಯರ ಪ್ರಮುಖ ಆರ್ಥಿಕ ಆಧಾರವಾದ ಕೃಷಿಯೇ ದುರ್ಬಲಗೊಂಡಿದೆ. ಪ್ರದೇಶದಲ್ಲಿನ ಮನೆಗಳು ಕೂಡ ಸುರಕ್ಷಿತವಿಲ್ಲದ ಸ್ಥಿತಿಯಲ್ಲಿರುವ ಕಾರಣ, ನಿವಾಸಿಗಳು ಆತಂಕದಲ್ಲಿದ್ದಾರೆ.
ಜಿಲ್ಲಾ ಕಲೆಕ್ಟರ್, ಭೂವಿಜ್ಞಾನ ವಿಭಾಗದ ಅಧಿಕಾರಿಗಳು ಇತ್ತೀಚೆಯೇ (2024ರಲ್ಲಿ) ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದರು. ನಂತರ, ಪಂಚಾಯತ್ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಜಿಲ್ಲಾ ಆಡಳಿತವು ತಯಾರಿಸಿದ ವಿವರವಾದ ವರದಿಯನ್ನು ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಗೆ ಸಲ್ಲಿಸಲಾಗಿದೆ.
ಇಂದು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಆಗಮಿಸಿದ ತಂಡ ಸ್ಥಳಕ್ಕೆ ಭೇಟಿ ನೀಡಿ ಭೌಗೋಳಿಕ ಬದಲಾವಣೆಗಳು ಹಾಗೂ ಜನಸಂಖ್ಯೆಗೆ ಉಂಟಾಗುವ ಪರಿಣಾಮಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿತು. ಅಗತ್ಯವಿರುವ ಎಲ್ಲಾ ಸಹಾಯವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ತಂಡದ ನಾಯಕರು ತಿಳಿಸಿದ್ದಾರೆ.