ಮಂಜೇಶ್ವರ : ಅದೆಷ್ಟೋ ನಿರೀಕ್ಷೆಗಳಿಂದ ಕಾಮಗಾರಿ ಪೂರ್ಣಗೊಂಡಿದ್ದ ಮಂಜೇಶ್ವರ ಗೋವಿಂದ ಪೈ – ಕೆದಂಬಾಡಿ ರಸ್ತೆಯ ಪುನರ್ಡಾಮಾರೀಕರಣ ಕಾಮಗಾರಿ ಪೂರ್ಣಗೊಂಡ ಒಂದೇ ವರ್ಷದಲ್ಲೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು ₹5.24 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಈ ರಸ್ತೆ ಡಾಮಾರೀಕರಣಗೊಂಡಿದ್ದರೂ, ಇದೀಗ ರಸ್ತೆ ಎರಡೂ ಬದಿಗಳು ಸಂಪೂರ್ಣವಾಗಿ ಕುಸಿದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.
ಸುಮಾರು 5.2 ಕಿ.ಮೀ ಉದ್ದದ ಈ ರಸ್ತೆ, ಕಾಮಗಾರಿ ಆರಂಭವಾಗುವ ವೇಳೆಯೇ ಅಗಲದಲ್ಲಿ ಅತಿಯಾದ ಕೊರತೆಯಿದ್ದ ಕಾರಣ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ರಸ್ತೆಯ ಎರಡೂ ಬದಿಗೂ ಕಾಂಕ್ರೀಟ್ ಹಾಕಲಾಗುವುದು ಎಂಬದಾಗಿ ಮಂಜೇಶ್ವರ ಶಾಸಕರ ಭರವಸೆ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ವಿರೋಧವನ್ನು ಹಿಂತೆಗೆದುಕೊಂಡಿದ್ದರು. ಆದರೂ ಈಗ ಯಾರೂ ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.
ಸ್ಥಳೀಯರ ಪ್ರಕಾರ ಗುತ್ತಿಗೆದಾರರು ಕಾಮಗಾರಿ ನಂತರ 3 ವರ್ಷಗಳ ತನಕ ರಸ್ತೆ ಬದಿಗೆ ಮಣ್ಣು ಹಾಕಿ ಸಮತಟ್ಟೆ ಮಾಡಬೇಕೆಂಬ ನಿಬಂಧನೆ ಇದ್ದರೂ ಕೂಡ, ಅದನ್ನು ಈಡೇರಿಸದೆ, ರಸ್ತೆಯ ಅಡ್ಡಭಾಗದಲ್ಲಿ ಹಳೆಯ ಜಲ್ಲಿಯನ್ನು ಮಾತ್ರ ಬಳಸಿ ಮೇಲ್ಮೈ ತಯಾರಿಸಿದ್ದು, ಇದೇ ಹದಗೆಡುವ ಪ್ರಮುಖ ಕಾರಣವಾಗಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ.
ರಸ್ತೆ ಎರಡೂ ಬದಿಗಳು ದಾರಿ ಮಧ್ಯೆಗೂ ಕುಸಿದಿರುವುದರಿಂದ ಈಗಾಗಲೇ ಅನೇಕ ವಾಹನಗಳು ಸಿಕ್ಕಿಹಾಕಿಕೊಂಡಿರುವ ಘಟನೆಗಳು ವರದಿಯಾಗಿವೆ. ಶಾಲಾ ಬಸ್ಸುಗಳು, ಎಂಬುಲೆನ್ಸ್ ಸೇವೆಗಳು, ಹಾಗೂ ದಿನಸರಿ ಜನಸಂಚಾರಕ್ಕೂ ಇದರಿಂದ ತೀವ್ರ ತೊಂದರೆ ಉಂಟಾಗಿದೆ.ರಸ್ತೆಯ ಬದಿಗಳ ಪಕ್ಕದ ಭಾಗವನ್ನು ತುರ್ತು ಆಧಾರದ ಮೇಲೆ ಕಾಂಕ್ರೀಟ್ ಮಾಡಬೇಕಾಗಿದೆ.ಕಾಮಗಾರಿ ಮೇಲ್ವಿಚಾರಣೆಗಾಗಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಬೇಕಾಗಿದೆ. ಗುತ್ತಿಗೆದಾರರ ವಿರುದ್ಧ ಕ್ರಮ ಮತ್ತು ಕಾಮಗಾರಿಯ ಗುಣಮಟ್ಟದ ತನಿಖೆ ನಡೆಸಬೇಕು ಎಂಬುದು ಸ್ಥಳೀಯರ ಬೇಡಿಕೆ.
ನಾವು ಭರವಸೆ ಮೇಲೆ ಕಾಮಗಾರಿ ನಡೆಯುವಾಗ ಪ್ರತಿಭಟನೆಯಿಂದ ಹಿಂದಕ್ಕೆ ಸರಿದೆವು. ಆದರೆ, ಈಗ ಯಾವ ಹೊಣೆಗಾರಿಕೆಯಿಂದಲೂ ಶಾಸಕರಿಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಈ ರಸ್ತೆ ಮಂಜೇಶ್ವರ ಕ್ಷೇತ್ರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ತಕ್ಷಣದ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಮಳೆಯಲ್ಲಿಯೇ ಈ ರಸ್ತೆ ಸಂಪೂರ್ಣ ಭಸ್ಮವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.