ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತು ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ರಸ್ತೆಗಳ ಬದಿಗಳಲ್ಲಿ ಕಾಡು ಪೊದರುಗಳು ನಿಕ್ಕಿಲವಾಗಿ ಬೆಳೆದು ನಿಂತಿದ್ದು, ಇದು ಈಗ ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಸರ್ಪಗಳು, ವಿಷಪೂರಿತ ಕೀಟಗಳು ಹಾಗೂ ಇತರೆ ಹಾನಿಕರ ಜಂತುಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈ ಮಾರ್ಗಗಳಿಂದ ನಿತ್ಯವೂ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ನಡೆದು ಹೋಗುತ್ತಿದ್ದು, ಅವರ ಜೀವದ ಸಲಾಮತಿ ಇದೀಗ ಪ್ರಶ್ನೆಗೆ ಒಳಪಟ್ಟಿದೆ. ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿಶೇಷವಾಗಿ ಈ ಪರಿಸ್ಥಿತಿ ಭೀತಿಯನ್ನು ಹೆಚ್ಚಿಸಿದೆ.
ಗ್ರಾಮಸ್ಥರು ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸ್ಪಷ್ಟವಾದ ಕ್ರಮ ಕೈಗೊಳ್ಳಲಾಗಿದೆ ಎಂಬ ನಿಶ್ಚಿತತೆ ಇಲ್ಲ. ಸ್ಥಳೀಯ ಆಡಳಿತ ಚುನಾವಣೆಯ ಸಮಯ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ, ತಮ್ಮ ಮತದಾರರನ್ನು ಹೇಗೆ ಸೆಳೆಯಬೇಕು ಎಂಬ ಲೆಕ್ಕಾಚಾರದಲ್ಲೇ ನಿರತರಾಗಿರುವ ಜನಪ್ರತಿನಿಧಿಗಳು, ಸಾರ್ವಜನಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ” ರಸ್ತೆ ಬದಿಗಳಲ್ಲಿ ತಲೆ ಎತ್ತಿರುವ ಕಾಡು ಪೊದರುಗಳು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಈಗಲೇ ಇವುಗಳನ್ನು ಕಡಿದು ಹಾಕದಿದ್ದರೆ, ಭವಿಷ್ಯದಲ್ಲಿ ವಿಷ ಜಂತುಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು” ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಕುಂತೂರು ಹೇಳುತಿದ್ದಾರೆ.
ಗ್ರಾಮದ ಇತರ ನಾಗರಿಕರೂ ಕೂಡ ತ್ವರಿತ ಕ್ರಮಕ್ಕಾಗಿ ಒತ್ತಾಯಿಸು ತ್ತಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ತಕ್ಷಣವಾಗಿ ಪರಿಸ್ಥಿತಿಯನ್ನು ಪರಿಗಣಿಸಿ, ಪೊದರುಗಳನ್ನು ಕಡಿದು, ರಸ್ತೆಯ ಬದಿಗಳನ್ನು ಶುದ್ಧಗೊಳಿಸಬೇಕು ಎಂಬುದು ಗ್ರಾಮಸ್ಥರ ಒಕ್ಕೊರಳಿನ ಬೇಡಿಕೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರು ಪ್ರತಿಭಟನೆಗೆ ಇಳಿಯುವ ಸಾಧ್ಯತೆಯೂ ಇದ್ದು, ಇದರಿಂದ ಚುನಾವಣಾ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.