ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭ

ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆಯ ಎರಡನೇ ಹಂತದ ಮತದಾನ ಕಾಸರಗೋಡು ಸಹಿತ ಅತ್ಯುತ್ತರ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಮೊದಲ, ಎರಡೂವರೆ ತಾಸಿನಲ್ಲಿ ಶೇ. 17 ಮತದಾನವಾಗಿದ್ದು, ಅಹಿತಕರ ಘಟನೆ ವರದಿಯಾಗಿಲ್ಲ.ಕೇರಳದ ಅತ್ಯುತ್ತರ ಕೇರಳದಿಂದ ಆರಂಭವಾಗುವ ಮೊದಲ ವಾರ್ಡ್ ಕಣ್ಣತೀರ್ಥ ಮರಿಯಾಶ್ರಮ ಶಾಲೆಯಲ್ಲಿ ಬೆಳಿಗ್ಗಿನಿಂದಲೇ ಉತ್ತಮ ರೀತಿಯಲ್ಲಿ ಮತದಾನ ಆರಂಭಗೊಂಡಿದ್ದು ಮಂಜೇಶ್ವರ ಗ್ರಾಮ ಪಂಚಾಯತಿನ ಕುಂಜತ್ತೂರು, ಉದ್ಯಾವರ, ಮಂಜೇಶ್ವರ ಸೇರಿದಂತೆ ಎಲ್ಲಾ 24 ವಾರ್ಡ್ ಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಕೆಲವೆಡೆ ಮತಯಂತ್ರ ಕೈಕೊಟ್ಟದ್ದಲ್ಲದೇ ಇನ್ನಿತರ ಸಮಸ್ಯೆ ತಲೆದೋರಿಲ್ಲ.

ಜಿಲ್ಲಾ ಪಂಚಾಯತಿನ ಬದಿಯಡ್ಕ ಡಿವಿಜನ್ ಎಡರಂಗದ ಅಭ್ಯರ್ಥಿ ಪ್ರಕಾಶ್‌ ಎಂಬವರ ಕುಂದ್ಲಾಜೆಯ ಮನೆ ಸಮೀಪದ ತೋಟದಲ್ಲಿ ಇಂದು ಬೆಳಿಗ್ಗೆ ನಾಡ ಬಾಂಬ್ ಪತ್ತೆಯಾಗಿದೆ. ನಾಲ್ಕು ನಾಡಬಾಂಬ್ ಪತ್ತೆಯಾಗಿದ್ದು, ಇದರಲ್ಲೊಂದು ಸಿಡಿದು ಸಾಕು ನಾಯಿ ಸಾವನ್ನಪ್ಪಿದೆ.

ಸ್ಥಳೀಯಾಡಳಿತ ಚುನಾವಣೆಯಂದೇ ಬೆಳಿಗ್ಗೆ ಅಭ್ಯರ್ಥಿಯ ಮನೆ ಪರಿಸರದಲ್ಲಿ ಬಾಂಬ್ ಪತ್ತೆಯಾದದ್ದು ಸುದ್ದಿ ಮಹತ್ವ ಪಡೆದಿದೆ. ಇದನ್ನು ಯಾರಾದರೂ ತಂದಿರಿಸಿದ್ದಾರೋ ಅಥವಾ ಕಾಡು ಹಂದಿ ಉಪಟಳ ತಡೆಗೆ ಶೇಖರಿಸಿಟ್ಟದ್ದೋ ಎಂಬ ನಿಟ್ಟಿನಲ್ಲಿ ತನಿಖೆ ಆರಂಭಗೊಂಡಿದೆ. ಬದಿಯಡ್ಕ ಪೊಲೀಸರು ಬಾಂಬ್ ವಶಪಡಿಸಿ ವಿಚಾರಣೆ ಕೈಗೊಂಡಿದ್ದಾರೆ. ಮತದಾನದ ದಿನವಾದ ಇಂದು ಬೆಳಿಗ್ಗೆ 7.30ಕ್ಕೆ ಬಾಂಬ್ ಪತ್ತೆಯಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!