ಕಾಸರಗೋಡು: ಈ ವರ್ಷ ನಡೆಯಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಬಳಸಲಾಗುವ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ಪರಿಶೀಲನೆಗೆ ಶನಿವಾರ ಬೆಳಿಗ್ಗೆ ಚಾಲನೆ ದೊರಕಿತು. ಕಾಸರಗೋಡು ಜಿಲ್ಲಾಧಿಕಾರಿ ವೇರ್‌ಹೌಸ್‌ನಲ್ಲಿ ಸಿದ್ಧಪಡಿಸಿದ ವಿಶೇಷ ಹಾಲ್‌ನಲ್ಲಿ ಈ ಪರಿಶೀಲನೆ ನಡೆಯುತ್ತಿದ್ದು, ಜನವರಿ 25ರವರೆಗೆ ಮುಂದುವರಿಯಲಿದೆ.
ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಐದು ಮಂದಿ ಮಾನ್ಯ ಇಂಜಿನಿಯರ್‌ಗಳ ತಂಡವು ಜಿಲ್ಲಾ ಚುನಾವಣಾಧಿಕಾರಿಯ ನೇರ ಮೇಲ್ವಿಚಾರಣೆಯಲ್ಲಿ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇಂಭಶೇಖರ್ ಅವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ವೇರ್‌ಹೌಸ್ ತೆರೆಯಲಾಯಿತು.
ಇಲೆಕ್ಷನ್ ಡೆಪ್ಯುಟಿ ಕಲೆಕ್ಟರ್ ಗೋಪಕುಮಾರ್ ಸೇರಿದಂತೆ ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು. ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಎಫ್‌ಎಲ್‌ಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಯಂತ್ರಗಳನ್ನು ಮಾತ್ರ ಚುನಾವಣೆಯಲ್ಲಿ ಬಳಸಲಾಗುವುದು. ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಭದ್ರತೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.