ಮಂಜೇಶ್ವರ: ಸಾಮರಸ್ಯ, ಶಾಂತಿ ಮತ್ತು ಧಾರ್ಮಿಕ ಸಹಬಾಳ್ವೆಯ ಪ್ರತೀಕವಾಗಿ ಹೆಸರುವಾಸಿಯಾದ ಮಂಜೇಶ್ವರದ ಉದ್ಯಾವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಉದ್ಯಾವರ ಸಾವಿರ ಜಮಾಅತ್ ಅಸ್ಸಯ್ಯಿದ್ ಶಹೀದ್ ವಲಿಯುಲ್ಲಾಹಿ ದರ್ಗಾದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮನ ಉರೂಸ್ ಮಹೋತ್ಸವವು ಬಾನುವಾರದಂದು ಅನ್ನದಾನದೊಂದಿಗೆ ಸಮಾಪ್ತಿಯಾಯಿತು.
ಕಳೆದ ಹತ್ತು ದಿನಗಳ ಕಾಲ ಭಕ್ತಿಭಾವದಿಂದ ನಡೆದ ಈ ಉರೂಸ್ ಆಚರಣೆಗಳು ಧರ್ಮೀಯ ಏಕತೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದವು. ಸಮಾರೋಪ ಸಮಾರಂಭದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಠನಾರ್ ಕ್ಷೇತ್ರದ ಪದಾಧಿಕಾರಿಗಳು ಹೊರೆ ಕಾಣಿಕೆಯೊಂದಿಗೆ ಆಗಮಿಸಿ ಭಾಗವಹಿಸಿದ್ದು, ಈ ಪ್ರದೇಶದಲ್ಲಿರುವ ಉದ್ಯಾವರ ಸಾವಿರ ಜಮಾಅತ್ ಮಸೀದಿ ಹಾಗೂ ಉದ್ಯಾವರ ಮಾಡ ದೇವಸ್ಥಾನಗಳ ನಡುವಿನ ಆಪ್ತ ಸಂಬಂಧವನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು. ಹಿಂದು–ಮುಸ್ಲಿಂ ಸಮುದಾಯಗಳ ನಡುವಿನ ಈ ಸಹಬಾಳ್ವೆ ಇಂದು ಕೂಡ ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ಸೌಹಾರ್ದತೆಯ ಉಜ್ಜ್ವಲ ಉದಾಹರಣೆಯಾಗಿ ಮುಂದುವರಿಯುತ್ತಿದೆ.
ಎರಡೂ ಸಮುದಾಯಗಳವರು ಪರಸ್ಪರ ಗೌರವ ಮತ್ತು ಸ್ನೇಹಭಾವದಿಂದ ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಈ ಭಾಗದ ಸಾಮಾಜಿಕ ಏಕತೆಯ ಬಲವಾದ ಸಂದೇಶವಾಗಿದೆ. ಧರ್ಮಭೇದವಿಲ್ಲದೆ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಸಾಗುತ್ತಿರುವ ಈ ಪರಂಪರೆ ಹೊಸ ತಲೆಮಾರಿಗೆ ಪ್ರೇರಣೆಯಾಗುತ್ತಿದೆ.
ಸಮಾರೋಪ ಸಮಾರಂಭವನ್ನು ಅಖಿಲ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರೂ ಹಾಗೂ ಜಮಾಅತ್ತಿನ ಸಂಯುಕ್ತ ಖಾಜಿಯೂ ಆಗಿರುವ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಘಲ್ ಉದ್ಘಾಟಿಸಿದರು. ಸಯ್ಯಿದ್ ಯು.ಕೆ. ಸೈಫುಲ್ಲಾ ತಂಘಲ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಭಾನುವಾರ ಪ್ರಾತಃಕಾಲದ ನಮಾಜಿನ ನಂತರದಿಂದ ಸೂರ್ಯಾಸ್ತಮಾನದವರೆಗೆ ಲಕ್ಷಾಂತರ ಭಕ್ತರಿಗೆ ಅನ್ನದಾನ ನೀಡಲಾಗಿದ್ದು, ಇದರೊಂದಿಗೆ ಉದಯಾಸ್ತಮನ ಉರೂಸ್ ಭಕ್ತಿಭಾವಪೂರ್ಣವಾಗಿ ಸಮಾಪ್ತಿಗೊಂಡಿತು.