ಮಂಗಳೂರು: ಇಲಾಖೆಯ ನಿರ್ಲಕ್ಷ್ಯದಿಂದ ಉಂಟಾದ ಅವ್ಯವಸ್ಥೆಯ ಪರಿಣಾಮ ವಿದ್ಯುತ್ ಕಂಬ ಬಿದ್ದು ಮೃತಪಟ್ಟ ಕಾರ್ಮಿಕ ಮುರುಗನ್ ಅವರ ಕುಟುಂಬಕ್ಕೆ ತುರ್ತಾಗಿ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ಭೋವಿ ಸಮಾಜದ ಮುಖಂಡ ಪವನ್ ಕುಮಾರ್ ಶಿರ್ವ ಮನವಿ ಸಲ್ಲಿಸಿದರು.
ತಮಿಳುನಾಡು ಮೂಲದ ಮುರುಗನ್ ಅವರು ಸುಮಾರು 12 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಸಂಭವಿಸಿದ ದುರ್ಘಟನೆಯಲ್ಲಿ ವಿದ್ಯುತ್ ಕಂಬ ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಸರಿಯಾದ ನಿರ್ವಹಣೆ ಕೊರತೆಯಿಂದ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೃತ ಮುರುಗನ್ ಅವರ ಕುಟುಂಬಕ್ಕೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಂಬಂಧಿಸಿದ ಇಲಾಖೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪವನ್ ಕುಮಾರ್ ಶಿರ್ವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಸ್ಥಳೀಯರು ಹಾಗೂ ಸಮಾಜದ ಮುಖಂಡರು ಕೂಡ ಈ ಘಟನೆಯ ಕುರಿತು ಆತಂಕ ವ್ಯಕ್ತಪಡಿಸಿ, ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.