ದೇಶದಾದ್ಯಂತ ರಂಗುರಂಗಿನ ಹಬ್ಬ ಹೋಳಿ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದು, ಕರಾವಳಿಯಲ್ಲಿಯೂ ಬಣ್ಣಗಳ ಸಂಭ್ರಮ ಕಂಗೊಳಿಸಿತು. ಉಡುಪಿಯ ಮಣಿಪಾಲ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹರ್ಷೋದ್ಗಾರಗಳ ನಡುವೆ ಹೋಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುತ್ತಿರುವ ಹಿನ್ನೆಲೆ, ಹೋಳಿ ಹಬ್ಬಕ್ಕೆ ಇಲ್ಲಿ ವಿಶೇಷ ಮಹತ್ವ ಇದೆ. ಪ್ರತೀ ವರ್ಷ ಹೋಳಿ ದಿನ ಕಾಲೇಜಿಗೆ ರಜೆ ಇರುವುದರಿಂದ ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಒಂದೇ ವೇದಿಕೆಯಲ್ಲಿ ಸೇರಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ವಿದ್ಯಾರ್ಥಿಗಳು ಪರಸ್ಪರ ಬಣ್ಣ ಎರಚಿಕೊಂಡು “ಹ್ಯಾಪಿ ಹೋಳಿ” ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಸಂಭ್ರಮದ ಕೂಗು ಹಾಕುತ್ತ ಕುಣಿದು ಕುಪ್ಪಳಿಸಿದ ಯುವಜನತೆ, ಡಿ.ಜೆ. ಸಂಗೀತದ ಸದ್ದಿಗೆ ಹೆಜ್ಜೆ ಹಾಕಿ ಉತ್ಸಾಹಭರಿತ ವಾತಾವರಣ ನಿರ್ಮಿಸಿದರು.
ವಿವಿಧ ಬಣ್ಣಗಳ ಗುಲಾಲ್ ಗಾಳಿಯಲ್ಲಿ ತೇಲಿ ಮೈದಾನವೆಲ್ಲಾ ಹಬ್ಬದ ಮೆರಗು ಪಡೆದುಕೊಂಡಿತ್ತು. ಭಿನ್ನ ಭಾಷೆ ಹಾಗೂ ಸಂಸ್ಕೃತಿಗಳಿಂದ ಬಂದಿರುವ ವಿದ್ಯಾರ್ಥಿಗಳು ಒಂದೇ ಮನಸ್ಸಿನಿಂದ ಹಬ್ಬ ಆಚರಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ, ಪರಸ್ಪರ ಸೌಹಾರ್ದತೆ ಹಾಗೂ ಸಂತಸದ ಹಂಚಿಕೆಯ ಸಂಕೇತವೆಂಬುದನ್ನು ಈ ಆಚರಣೆ ಸ್ಪಷ್ಟಪಡಿಸಿತು.