ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಪಾವತಿ ರಶೀದಿಯ ನಕಲಿ ಸೃಷ್ಟಿ ಮತ್ತು ವಂಚನೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನ ಬಂಧಿತ ಆರೋಪಿ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ’ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದು, ಆ ಸಂದರ್ಭ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿರುತ್ತದೆ. ಆದರೆ ಬಾಲಕೃಷ್ಣ ಸುವರ್ಣರವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣರವರಿಂದ ಪೃಥ್ವಿರಾಜ್ ಶೆಟ್ಟಿ ಅಲಿಯಾಸ್ ಮುನ್ನಾ ಎಂಬಾತನು ೨೭,೯೯೦ ರೂ. ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಟಿಸಿ ನೀಡಿರುವುದು ತಿಳಿದು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಜೊತೆಗೆ ಬಾಲಕೃಷ್ಣ ಸುವರ್ಣರವರು ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆಯನ್ನು ಸೃಷ್ಟಿಸಿ ವಂಚಿಸಿರುವ ಪೃಥ್ವಿರಾಜ್ ಶೆಟ್ಟಿ ವಿರುದ್ಧ ದೂರು ನೀಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಇನ್ನು ಪಂಪ್ ವೆಲ್ ನಲ್ಲಿರುವ ಲಕ್ಷ್ಮಿ ಹಾರ್ಡ್ ವೇರ್ ವರ್ಕ್ ಶಾಪ್ ನ ಮಾಲೀಕರಾದ ದೇವಾಂಗ ಕೆ. ಪಟೇಲ್ ರವರು ಕೂಡಾ ಪೃಥ್ವಿರಾಜ್ ಶೆಟ್ಟಿ ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ನಕಲಿ ಆಸ್ತಿ ತೆರಿಗೆಯನ್ನು ಸೃಷ್ಟಿಸಿ ವಂಚಿಸಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ ದಾಖಲಾದ ವೇಳೆ ಮಂಗಳೂರು, ಉಜ್ಜೋಡಿ, ಬೈಕ್ ಕ್ಲಿನಿಕ್ ಹತ್ತಿರದ ನಿವಾಸಿಯಾಗಿದ್ದ ಆರೋಪಿ ಪೃಥ್ವಿರಾಜ್ ಶೆಟ್ಟಿ ತಲೆಮರೆಸಿಕೊಂಡಿದ್ದ. ಆರೋಪಿಯು ಕೇರಳದ ಹಲವು ಕಡೆಗಳಲ್ಲಿ ತಲೆಮರೆಸಿಕೊಂಡು ನಂತರ ಕಿನ್ನಿಗೋಳಿಗೆ ಬರುತ್ತಿದ್ದಾನೆ ಎಂಬ ಮಾಹಿತಿಯ ಮೇರೆಗೆ ಜುಲೈ ೨೫ರಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಯ ತಂದೆ ಗಣೇಶ್ ರವರು ದೇವಾಂಗ್ ಕೆ ಪಟೇಲ್ ರವರ ಅಂಗಡಿಯಲ್ಲಿ ಕಮರ್ಷಿಯಲ್ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದೆ. ನಂತರ ತನ್ನ ತಂದೆಗೆ ಅನಾರೋಗ್ಯವಾದ ಕಾರಣ ೨೦೦೪ ರಿಂದ ತಾನು ಕೆಲಸವನ್ನು ಮುಂದುವರಿಸಿ, ದೇವಾಂಗ ಕೆ ಪಟೇಲ್ ಹಾಗೂ ಅವರ ಪರಿಚಯದ ಬಾಲಕೃಷ್ಣ ರವರಿಗೆ ಸಂಬಂಧಿಸಿದ ಉದ್ದಿಮೆಯ ೨೦೨೫-೨೬ ನೇ ಸಾಲಿನ ಪರವಾನಿಗೆಯನ್ನು ನವೀಕರಣ ಮಾಡಲು ಹಾಗೂ ಕಟ್ಟಡಗಳ ಆಸ್ತಿ ತೆರಿಗೆ ಪಾವತಿ ಮಾಡಲು ಹಣ ಪಡೆದುಕೊಂಡು ತನ್ನ ಮೊಬೈಲ್ ನಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಒಅಅ ಖಿಡಿಚಿಜe ಐiಛಿeಟಿಛಿe ಹಾಗೂ ಒಅಅ Pಡಿoಠಿeಡಿಣಥಿ ಖಿಚಿx ವೆಬ್ ಸೈಟ್ ಗೆ ಲಾಗ್ ಇನ್ ಆಗಿ, ಉದ್ದಿಮೆ ಮಾಲಿಕರ ಮೊಬೈಲ್ ಔಖಿP ಪಡೆದು, ಹಿಂದಿನ ವರ್ಷದ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆ ರಶೀದಿಯನ್ನು ಡೌನ್ ಲೋಡ್ ಮಾಡಿ, ೩ಡಿಜ Pಚಿಡಿಣಥಿ ಅಪ್ಲಿಕೇಶನ್ ಮುಖಾಂತರ ದಿನಾಂಕಗಳನ್ನು ಹಾಗೂ ಇನ್ನಿತರ ಮಾಹಿತಿಗಳನ್ನು ಎಡಿಟ್ ಮಾಡಿ ಅದನ್ನು ಪ್ರಿಂಟ್ ಮಾಡಿ, ದೇವಾಂಗ್ ಕೆ ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣ ರವರಿಗೆ ನೀಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯು ದೇವಾಂಗ್ ಕೆ ಪಟೇಲ್ ಹಾಗೂ ಬಾಲಕೃಷ್ಣ ಸುವರ್ಣರಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ ಅವರಿಗೆ ನೀಡಿ ವಂಚಿಸಿದ್ದಾನೆ. ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಉಪಯೋಗಿಸಿದ ಸಲಕರಣೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಆರೋಪಿಯು ಇನ್ನೂ ಇತರ ಉದ್ದಿಮೆದಾರರಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನೀಡಿರುತ್ತಾನೆಯೇ ಎಂಬ ಬಗ್ಗೆ ಕಂಕನಾಡಿ ಮತ್ತು ಬರ್ಕೆ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ.